ಎಸ್ಸಿ-ಎಸ್ಟಿ ನೌಕರರಿಗೆ ಮುಂಭಡ್ತಿ: ರಾಜ್ಯ ಸರಕಾರದಿಂದ ತಾರತಮ್ಯ ನೀತಿ- ಮಾಜಿ ಸಚಿವ ನರೇಂದ್ರ ಸ್ವಾಮಿ ಆರೋಪ

Update: 2019-06-25 16:40 GMT
ಮಾಜಿ ಸಚಿವ ನರೇಂದ್ರ ಸ್ವಾಮಿ

ಬೆಂಗಳೂರು, ಜೂ.25: ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ನೌಕರರಿಗೆ ಮುಂಭಡ್ತಿ ನೀಡಿ, ಸ್ಥಳ ನಿಯುಕ್ತಿ ಮಾಡುವ ವಿಚಾರದಲ್ಲಿ ರಾಜ್ಯ ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಆರೋಪಿಸಿದರು. 

ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪವಿತ್ರಾ ಪ್ರಕರಣದಲ್ಲಿ ಹಿಂಭಡ್ತಿಗೊಳಗಾಗಿರುವ ನೌಕರರಿಗೆ ಸುಪ್ರೀಂ ಕೋರ್ಟ್ ಆದೇಶದ ನಂತರ ಮುಂಭಡ್ತಿ ನೀಡಿ ಸ್ಥಳ ನಿಯುಕ್ತಿ ಮಾಡುವ ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಅದರಲ್ಲೂ ಸಚಿವ ರೇವಣ್ಣ ಅವರ ಲೋಕೋಪಯೋಗಿ ಇಲಾಖೆಯಲ್ಲಿ ಹೆಚ್ಚಿನ ತಾರತಮ್ಯ ನೀತಿ ಕಂಡು ಬಂದಿದ್ದು ಈ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಮಾಡಿದರು.

ಆರೋಗ್ಯ, ಪಶುಪಾಲನೆ, ಶಿಕ್ಷಣ, ಇಂಧನ ಇಲಾಖೆ ಸೇರಿದಂತೆ ಇನ್ನೂ ಹಲವು ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಹಿಂಭಡ್ತಿ ರದ್ದುಗೊಂಡಿಲ್ಲ. ಇದರ ಜತೆಗೆ ಕೆಲವು ಕಡೆಗಳಲ್ಲಿ ಮಾತೃ ಇಲಾಖೆಯಿಂದ ಸ್ಮಾರ್ಟ್ ಸಿಟಿ ಯೋಜನೆ, ನೀರಾವರಿ ಇಲಾಖೆಗೆ ಇಂಜಿನಿಯರ್‌ಗಳನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಅವರಿಗೆ ಕೆಲಸವಿಲ್ಲದೆ ಹಾಗೆ ಕೂರುವ ಪರಿಸ್ಥಿತಿ ಬಂದಿದೆ. ಈ ಸಂಬಂಧ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಅಸ್ತಿತ್ವಕ್ಕೆ ಬಂದಿದೆ. ಆದರೆ ಕೆಲವು ವಿಚಾರಗಳಲ್ಲಿ ಸಾಮಾಜಿಕ ನ್ಯಾಯವನ್ನೇ ಮರೆತಿದೆ. ಸರಕಾರ ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳ ನೆರವಿಗೆ ಬರಬೇಕು ಎಂದು ಹೇಳಿದರು.

ರಾಜ್ಯದ ಜನಸಂಖ್ಯೆಯ ನಾಲ್ಕನೆ ಒಂದು ಭಾಗದಷ್ಟಿರುವ ಸಮುದಾಯದವರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಲ್ಲಿ ಆಡಳಿತದಲ್ಲಿರುವ ಸಚಿವರು, ವಿರೋಧ ಪಕ್ಷದವರು ಮತ್ತು ವಿರೋಧ ಪಕ್ಷದ ನಾಯಕರು ಈ ವಿಚಾರದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಅಲ್ಲದೆ ರಾಜ್ಯ ಸರಕಾರ ಸುಪ್ರಿಂ ಕೋರ್ಟ್ ಆದೇಶವನ್ನು ಪಾಲಿಸಿ ಸಾಮಾಜಿಕ ನ್ಯಾಯದಡಿ ಎಸ್ಸಿ-ಎಸ್ಟಿ ನೌಕರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಗ್ರಾಮ ವಾಸ್ತವ್ಯಕ್ಕೆ ಮೆಚ್ಚುಗೆ: ಗ್ರಾಮ ವಾಸ್ತವ್ಯ ಎಂಬುವುದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಚ್ಚು ಮೆಚ್ಚಿನ ಕಾರ್ಯಕ್ರಮ. ಈ ಹಿಂದೆಯೂ ಅವರು ಗ್ರಾಮ ವಾಸ್ತವ್ಯದ ಮೂಲಕ ಜನಮನ ಗೆದಿದ್ದರು. ಈಗ ಮತ್ತೆ ಆ ಕಾರ್ಯಕ್ರಮ ಆರಂಭಿಸಿದ್ದಾರೆ. ವಿರೋಧ ಪಕ್ಷಗಳ ಟೀಕೆಗಳಿಗೆ ಮಹತ್ವ ಕೊಡುವ ಆಗತ್ಯವಿಲ್ಲ. ಗ್ರಾಮ ವಾಸ್ತವ್ಯದಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News