ಕ್ಷೀಣಿಸಿದ ಮುಂಗಾರು: ಕಾಫಿನಾಡಿನಲ್ಲಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ; ಆತಂಕದಲ್ಲಿ ರೈತರು

Update: 2019-06-25 16:59 GMT

ಚಿಕ್ಕಮಗಳೂರು, ಜೂ.25: ಕಳೆದೊಂದು ವಾರದ ಹಿಂದೆ ಕಾಫಿನಾಡಿನಾದ್ಯಂತ ಧಾರಾಕಾರವಾಗಿ ಸುರಿದು ರೈತಾಪಿ ವರ್ಗದಲ್ಲಿ ಸಂತಸಕ್ಕೆ ಕಾರಣವಾಗಿದ್ದ ಮುಂಗಾರು ಮಳೆ ಪ್ರಸಕ್ತ ಜಿಲ್ಲೆಯಾದ್ಯಂತ ಕ್ಷೀಣಿಸಿದ್ದು, ಮಳೆಯ ಕೊರತೆಯಿಂದಾಗಿ ಮಲೆನಾಡು ಸೇರಿದಂತೆ ಜಿಲ್ಲೆಯ ಬಯಲುಸೀಮೆ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗೆ ಭಾರೀ ಹಿನ್ನಡೆಯಾಗಿದೆ.

ಕಳೆದೊಂದು ವಾರದ ಹಿಂದೆ ಜಿಲ್ಲೆಗೆ ಮುಂಗಾರು ಮಳೆ ಪ್ರವೇಶವಾಗಿದ್ದು, ಎರಡು ದಿನಗಳ ಕಾಲ ಜಿಲ್ಲಾದ್ಯಂತ ಉತ್ತಮ ಮುಂಗಾರು ಮಳೆಯ ಸಿಂಚನವಾಗಿತ್ತು. ಆದರೆ ನಂತರದ ದಿನಗಳಲ್ಲಿ ಜಿಲ್ಲೆಯ ಮಲೆನಾಡು ವ್ಯಾಪ್ತಿಯ ತಾಲೂಕುಗಳೂ ಸೇರಿದಂತೆ ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಕ್ಷೀಣಿಸಿದೆ. ಪರಿಣಾಮ ಜಿಲ್ಲೆಯ ಪ್ರಮುಖ ಬೆಳೆಗಳಾದ ಭತ್ತ, ಕಾಫಿ, ಅಡಿಕೆ ಸೇರಿದಂತೆ ತರಕಾರಿ ಬೆಳೆಗಳ ಕೃಷಿಕರು ಉತ್ತಮ ಮಳೆಗಾಗಿ ಪ್ರತಿನಿತ್ಯ ಆಕಾಶ ನೋಡುವಂತಾಗಿದ್ದು, ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ.

ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಾದ ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ಭತ್ತ, ಅಡಿಕೆ, ಕಾಫಿ ಪ್ರಮುಖ ಬೆಳೆಗಳಾಗಿವೆ. ಈ ಪೈಕಿ ಕಾಫಿ ಹಾಗೂ ಅಡಿಕೆ ತೋಟಗಳಿಗೆ ಇತ್ತೀಚೆಗೆ ಸುರಿದ ಮಳೆ ಒಂದು ಹಂತಕ್ಕೆ ನೀರೊದಗಿಸಿದೆ. ಸದ್ಯ ಮಳೆ ಬಿಡುವು ನೀಡಿರುವುದರಿಂದ ಕಾಫಿ, ಅಡಿಕೆ ತೋಟಗಳಲ್ಲಿ ಚಿಗುರು ತೆಗೆಯುವುದು, ಕಳೆ ಗಿಡಗಳ ನಾಶ ಮಾಡುವುದು, ಗೊಬ್ಬರ ಸಿಂಪಡಣೆ, ಅಡಿಕೆ ಮರಗಳಿಗೆ ಬೋರ್ಡೋ ದ್ರಾವಣ ಸಿಂಪಡಣೆ, ಕಾಫಿ, ಅಡಿಕೆ ಗಿಡಿಗಳ ನಾಟಿಯಂತಹ ಕೃಷಿ ಚಟುವಟಿಕೆಗಳು ಭರದಿಂದ ನಡೆಯುತ್ತಿವೆ. ಆದರೆ ಇನ್ನು 15 ದಿನಗಳಲ್ಲಿ ಉತ್ತಮ ಮಳೆಯಾಗದಿದ್ದಲ್ಲಿ ಕಾಫಿ, ಅಡಿಕೆ ತೋಟಗಳಲ್ಲಿ ಕೈಗೊಂಡ ಕೃಷಿ ಚಟುವಟಿಕೆಗಳು ವ್ಯರ್ಥವಾಗಲಿವೆ ಎಂಬುದು ಬೆಳೆಗಾರರ ಆತಂಕ.

ಇನ್ನು ಈ ತಾಲೂಕುಗಳ ವ್ಯಾಪ್ತಿಯಲ್ಲಿ ಭತ್ತದ ಕೃಷಿ ಪ್ರಮುಖ ಕೃಷಿ ಚಟುವಟಿಕೆಯಾಗಿದ್ದು, ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿದಿದ್ದರೆ ಈಗಾಗಲೇ ಮಲೆನಾಡಿನಾದ್ಯಂತ ಇರುವ ಗದ್ದೆಗಳಲ್ಲಿ ಸಸಿಮಡಿಗಳು ಸಿದ್ಧಗೊಳ್ಳುತ್ತಿದ್ದವು. ಆದರೆ ಮುಂಗಾರು ಕ್ಷೀಣಿಸಿರುವುದರಿಂದ ಭತ್ತದ ಗದ್ದೆಗಳಿಗೆ ನೀರಿನ ಕೊರತೆ ಉಂಟಾಗಿದ್ದು, ಹೂಟಿ ಮಾಡಲಾದ ಗದ್ದೆಗಳನ್ನು ನಾಟಿ ಸಿದ್ಧಗೊಳಿಸಲು ಸಾಧ್ಯವಾಗುತ್ತಿಲ್ಲ. ಸಸಿಮಡಿಗಳನ್ನು ಸಿದ್ಧ ಮಾಡಲೂ ಗದ್ದೆಗಳಲ್ಲಿ ನೀರಿಲ್ಲ ಎಂದು ಭತ್ತದ ಕೃಷಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ ಸತತ ಬರಗಾಲದ ಬೇಗೆಗೆ ಸಿಲುಕಿರುವ ಕಡೂರು ತಾಲೂಕು ವ್ಯಾಪ್ತಿಯಲ್ಲಿ ಈ ಬಾರಿ ಆಗಾಗ್ಗೆ ಸಾಧಾರಣ ಮಳೆ ಸುರಿದಿದ್ದ ಪರಿಣಾಮ ರೈತರು ಕೃಷಿ ಭೂಮಿಯಲ್ಲಿ ಬೆಳೆಬೆಳೆಯಲು ಸಿದ್ಧತೆ ಮಾಡಿಕೊಂಡು ಬಿತ್ತನೆ ಬೀಜಗಳ ನಾಟಿಗೆ ಸಿದ್ಧತೆ ನಡೆಸಿದ್ದರು. ಆದರೆ ಉತ್ತಮ ಮುಂಗಾರು ಮಳೆಯಾಗುವ ನಿರೀಕ್ಷೆಯನ್ನು ವರುಣ ಹುಸಿಯಾಗಿಸಿರುವ ಪರಿಣಾಮ ಬರ ಪ್ರದೇಶದ ರೈತರ ಪಾಲಿಗೆ ಈ ಬಾರಿಯೂ ನಿರಾಶೆಯಾಗಿದೆ. ಇದು ಬರಪೀಡಿತ ತಾಲೂಕಿನ ರೈತರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನು ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಇದುವರೆಗೂ ಸಾಧಾರಣ ಮಳೆಯಾಗಿದ್ದು, ಭತ್ತ ಹಾಗೂ ತರಕಾರಿ ಬೆಳೆಗಳ ಕೃಷಿಕರು ಹೊಲಗದ್ದೆಗಳಲ್ಲಿ ಬಿತ್ತನೆ, ನಾಟಿಗೆ ಸಿದ್ಧತೆ ಕೈಗೊಂಡಿದ್ದಾರಾದರೂ ಮಂಗಾರು ಕ್ಷೀಣಗೊಂಡಿರುವುದರಿಂದ ಈ ತಾಲೂಕು ವ್ಯಾಪ್ತಿಯ ರೈತರೂ ತಲೆಮೇಲೆ ಕೈಹೊತ್ತು ಆಕಾಶ ನೋಡುವಂತಾಗಿದೆ.

ಸಾಮಾನ್ಯವಾಗಿ ಜೂನ್ ತಿಂಗಳ ಆರಂಭದಲ್ಲೇ ಕಾಫಿನಾಡಿಗೆ ಮುಂಗಾರು ಪ್ರವೇಶವಾಗುವುದು ವಾಡಿಕೆ. ಆದರೆ ಈ ಬಾರಿ ಜಿಲ್ಲೆಗೆ ತಡವಾಗಿ ಮುಂಗಾರು ಪ್ರವೇಶವಾಗಿದ್ದು, ಆರಂಭದಲ್ಲಿ ಎರಡು ದಿನಗಳ ಕಾಲ ಧಾರಾಕಾರವಾಗಿ ಸುರಿದ ಮಳೆ ರೈತರು, ಬೆಳೆಗಾರರಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಹುಟ್ಟಿಸಿತ್ತು. ಆದರೆ ದಿನಕಳೆದಂತೆ ಮುಂಗಾರು ಕ್ಷೀಣಿಸಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಅರ್ಧಂಬರ್ಧ ಕೈಗೊಳ್ಳುವಂತಾಗಿದೆ. ಕಡೂರು, ತರೀಕೆರೆ, ಚಿಕ್ಕಮಗಳೂರು ತಾಲೂಕುಗಳ ವ್ಯಾಪ್ತಿಯಲ್ಲಿ ತರಕಾರಿಯಂತಹ ಬೆಳೆಗಳನ್ನು ಬೆಳೆಯುವ ರೈತರು ಬಿತ್ತನೆ ಬೀಜಗಳನ್ನು ಖರೀದಿಸಿದ್ದಾರಾದರೂ ಮಳೆ ಇಲ್ಲದೇ ನಾಟಿ ಮಾಡಿದಲ್ಲಿ ಬೀಜಗಳು ಒಣಗಿ ನಾಶವಾಗುವ ಭೀತಿಯಿಂದಾಗಿ ಬಿತ್ತನೆ ಮಾಡಲೂ ಹಿಂದು ಮುಂದು ನೋಡುವಂತಾಗಿದೆ.

ಜಿಲ್ಲೆಯ ಮಲೆನಾಡು ವ್ಯಾಪ್ತಿಯ ತಾಲೂಕುಗಳಲ್ಲಿ ಪ್ರಸಕ್ತ ಪ್ರತಿದಿನ ಬಿಸಿಲಿನೊಂದಿಗೆ ತುಂತುರು ಮಳೆ ಸುರಿಯುತ್ತಿದೆ. ಮೂಡಿಗೆರೆ, ಕೊಪ್ಪ, ಶೃಂಗೇರಿ, ತರೀಕೆರೆ, ಚಿಕ್ಕಮಗಳೂರು ತಾಲೂಕುಗಳ ವ್ಯಾಪ್ತಿಯಲ್ಲಿ ಆಗಾಗ್ಗೆ ಧಾರಾಕಾರ ಮಳೆ ಸುರಿಯುತ್ತಿದೆಯಾದರೂ ನಿರಂತರವಾಗಿ ಮಳೆಯಾಗದ ಪರಿಣಾಮ ಧರೆಗೆ ಬಿದ್ದ ಮಳೆ ನೀರು ಬಿಸಿಲ ಝಳಕ್ಕೆ ಆವಿಯಾಗುತ್ತಿದ್ದು, ಕೃಷಿ ಭೂಮಿಗೆ ಅಗತ್ಯವಾಗಿರುವಷ್ಟು ನೀರು ಸಿಗುತ್ತಿಲ್ಲ ಎಂಬ ಅಭಿಪ್ರಾಯ ರೈತರದ್ದಾಗಿದೆ. ಇನ್ನು 15ರಿಂದ 20 ದಿನಗಳಲ್ಲಿ ಜಿಲ್ಲಾದ್ಯಂತ ಉತ್ತಮ ಮಳೆಯಾಗದಿದ್ದಲ್ಲಿ ಭತ್ತ, ಕಾಫಿ, ಅಡಿಕೆ ಸೇರಿದಂತೆ ತರಕಾರಿ ಬೆಳೆಗಳನ್ನು ಬೆಳೆಯುವ ರೈತರು, ಬೆಳೆಗಾರರು ಸಂಕಷ್ಟ ಎದುರಿಸುವುದು ನಿಶ್ಚಿತ ಎಂಬ ಆತಂಕ ರೈತರದ್ದಾಗಿದೆ. 

ಕಳೆದ ಬಾರಿ ಜಿಲ್ಲಾದ್ಯಂತ ಉತ್ತಮ ಮಳೆಯಾಗಿದ್ದರಿಂದ ಕಾಫಿ, ಅಡಿಕೆ, ಭತ್ತ ಸೇರಿದಂತೆ ಇನ್ನಿತರ ಬೆಳೆಗಳು ಉತ್ತಮ ಫಸಲು ನೀಡಿದ್ದವು. ಆದರೆ ಅತೀವೃಷ್ಟಿಯಾದ ಪರಿಣಾಮ ಬೆಳೆದ ಬೆಳೆಗಳು ರೈತರಿಗೆ ಸಿಗದೇ ಮಳೆಗೆ ಆಹುತಿಯಾಗಿದ್ದವು. ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆ ಇತ್ತು. ಆದರೆ ಇದುವರೆಗೂ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿದಿಲ್ಲ. ಇದುವರೆಗೂ ಸುರಿದ ಸಾಧಾರಣ ಮಳೆಯಿಂದಾಗಿ ಕಾಫಿ, ಅಡಿಕೆ, ಕಾಳುಮೆಣಸು ಬೆಳೆ ಕಾಯಿ ಕಟ್ಟಿವೆ. ಆದರೆ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದಲ್ಲಿ ಈ ಬೆಳೆಗಳೂ ವಿವಿಧ ರೋಗಗಳಿಗೆ ಆಹುತಿಯಾಗಲಿವೆ. 
- ಸತೀಶ್‍ ಕುಮಾರ್, ಕಾಫಿ, ಅಡಿಕೆ ಬೆಳೆಗಾರ, ಮಾಗುಂಡಿ

ಮಲೆನಾಡಿನಲ್ಲಿ ಜೂನ್ ತಿಂಗಳ ಅಂತ್ಯಕ್ಕೆ ಸಸಿಮಡಿಗಳು ಸಿದ್ಧವಾಗಿರುತ್ತವೆ. ಜುಲೈ ತಿಂಗಳಲ್ಲಿ ಭತ್ತದ ಗದ್ದೆಗಳನ್ನು ಹದಗೊಳಿಸಿ ನಾಟಿ ಮಾಡುವ ಕೆಲಸ ಆರಂಭವಾಗುತ್ತದೆ. ಆದರೆ ಈ ಬಾರಿ ಮುಂಗಾರು ಸಕಾಲದಲ್ಲಿ ಬಂದಿಲ್ಲ. ತಡವಾಗಿ ಬಂದ ಮುಂಗಾರು ಮಳೆ ಆಗಾಗ್ಗೆ ಸುರಿದು ನಾಪತ್ತೆಯಾಗುತ್ತಿದೆ. ಇದರಿಂದಾಗಿ ಭತ್ತದ ಗದ್ದೆಗಳಲ್ಲಿ ನೀರು ಸಾಲುತ್ತಿಲ್ಲ. ಗದ್ದೆಗಳನ್ನು ಹೂಟಿ ಮಾಡಿದ್ದರೂ ಹದ ಮಾಡಲು ನೀರೇ ಇಲ್ಲ. ಮುಂದಿನ 15 ದಿನಗಳಲ್ಲಿ ನಿರಂತರ ಮಳೆಯಾಗದಿದ್ದಲ್ಲಿ ಭತ್ತದ ಗದ್ದೆಗಳನ್ನು ಈ ಬಾರಿ ಪಾಳು ಬಿಡಬೇಕಾಗುತ್ತದೆ.
- ಆನಂದ, ಭತ್ತದ ಕೃಷಿ, ಕಳಸ

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News