ನಾಲೆಗೆ ನೀರು ಬಿಡುಗಡೆ ವಿಚಾರ: ಸಚಿವ ಪುಟ್ಟರಾಜು ವಿರುದ್ಧ ಆಕ್ರೋಶ

Update: 2019-06-25 17:32 GMT

ಮಂಡ್ಯ, ಜೂ.25: ಜಿಲ್ಲೆಯ ಎಲ್ಲಾ ಭಾಗಕ್ಕೆ ನೀರು ಬಿಡುಗಡೆಗೆ ಒತ್ತಾಯಿಸಿ ರೈತರು ಐದು ದಿನದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೆ, ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾಲೆಗೆ ನೀರು ಬಿಡುಗಡೆ ಮಾಡಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಕೆಆರ್‍ಎಸ್ ಹಾಗೂ ಹೇಮಾವತಿ ಜಲಾಶಯದಿಂದ ವಿಶ್ವೇಶ್ವರಯ್ಯ ನಾಲೆ ಸೇರಿದಂತೆ ಎಲ್ಲಾ ನಾಲೆಗಳಿಗೆ ನೀರು ಹರಿಸಿ ಬೆಳೆಗಳ ಉಳಿಸಬೇಕೆಂಬುದು ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಧರಣಿ ನಡೆಯುತ್ತಿದೆ. ಜಲಾಶಯಗಳಲ್ಲಿ ನೀರಿನ ಕೊರತೆ ಮತ್ತು ನೀರು ಬಿಡುಗಡೆ ಅಧಿಕಾರ ಕಾವೇರಿ ನೀರು ನಿರ್ವಹಣಾ ಸಮಿತಿಗೆ ಬರುವ ಕಾರಣ ನಾಲೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲವೆಂದು ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ನೀರು ಬಿಡುಗಡೆ ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದೆ. ಆದರೆ, ಸಚಿವ ಸಿ.ಎಸ್.ಪುಟ್ಟರಾಜು ತಾನು ಪ್ರತಿನಿಧಿಸುವ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿಯ ಬೆಳೆಗಳಿಗೆ ಮಾತ್ರ ಸಿಡಿಎಸ್(ಚಿಕ್ಕದೇವರಾಯ ನಾಲೆ) ಮೂಲಕ ನೀರು ಬಿಡುಗಡೆ ಮಾಡಿರುವುದು ಸಹಜವಾಗಿ ಬೇರೆ ವ್ಯಾಪ್ತಿಯ ರೈತರನ್ನು ಕೆರಳಿಸಿದೆ.

ಕೆಆರ್‍ಎಸ್ ಜಲಾಶಯದಿಂದ ಸಿಡಿಎಸ್ ನಾಲೆ ಮೂಲಕ ನೀರು ಬಿಡುಗಡೆ ಮಾಡುವ ಮೂಲಕ ಆ ವ್ಯಾಪ್ತಿಯ ಬೆಳೆಗಳ ರಕ್ಷಣೆಗೆ ಅನುವು ಮಾಡಿರುವ ಪುಟ್ಟರಾಜು, ರೈತರಲ್ಲಿ ಒಡಕು ಉಂಟುಮಾಡುವ ಯತ್ನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News