ಇವಿಎಂ ನಿಷೇಧಿಸಲು ಒತ್ತಾಯಿಸಿ ಮಹಿಳಾ ಕಾಂಗ್ರೆಸ್ ನಿಂದ ಪೋಸ್ಟ್ ಕಾರ್ಡ್ ಚಳುವಳಿ

Update: 2019-06-25 17:39 GMT

ಮೈಸೂರು,ಜೂ.24: ಮುಂಬರುವ ಚುನಾವಣೆಗಳಲ್ಲಿ ಮತಯಂತ್ರ ಬಳಕೆ ನಿರ್ಬಂಧಿಸಿ, ಬ್ಯಾಲೆಟ್ ಪೇಪರ್ ಬಳಸುವ ವ್ಯವಸ್ಥೆ ಜಾರಿಗೊಳಿಸುವಂತೆ ಆಗ್ರಹಿಸಿ ಮಹಿಳಾ ಕಾಂಗ್ರೆಸ್ ವತಿಯಿಂದ ಇಂದು ಪೋಸ್ಟ್ ಕಾರ್ಡ್ ಚಳವಳಿ ನಡೆಸಲಾಯಿತು.

ಮೈಸೂರು ಮಹಾನಗರ ಪಾಲಿಕೆ ಮುಂಭಾಗ ಮಂಗಳವಾರ ನಡೆದ ಪೋಸ್ಟ್ ಕಾರ್ಡ್ ಚಳವಳಿಯಲ್ಲಿ ಪಾಲ್ಗೊಂಡ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಡೆದ ಚುನಾವಣೆಗಳಲ್ಲಿ ಇವಿಎಂ ಕುರಿತು ಅನುಮಾನ ಮೂಡಿದೆ. ಆದ್ದರಿಂದ ಬ್ಯಾಲೆಟ್ ಪೇಪರ್ ಬಳಕೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಒಂದು ಲಕ್ಷ ಪೋಸ್ಟ್ ಕಾರ್ಡ್ ಗಳನ್ನು ರಾಷ್ಟ್ರಪತಿಯವರಿಗೆ ಕಳುಹಿಸಲಾಗುತ್ತಿದೆ ಎಂದರು.

ಕಾಂಗ್ರೆಸ್ ಮಹಿಳಾ ಘಟಕದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಚಳವಳಿ ನಡೆಯುತ್ತಿದೆ. ದೇಶದಲ್ಲಿ ಬಿಜೆಪಿಯನ್ನು ಹೊರತುಪಡಿಸಿ ಬಹುತೇಕ ರಾಜಕೀಯ ಪಕ್ಷಗಳು ಇವಿಎಂ ಬೇಡ ಎಂದೇ ಹೇಳಿವೆ. ನಮ್ಮ ದೇಶಕ್ಕಿಂತಲೂ ತಾಂತ್ರಿಕವಾಗಿ ಮುಂದುವರಿದಿರುವ ಅಮೇರಿಕ, ಜರ್ಮನಿ, ಹಾಗೂ ಇನ್ನಿತರ ರಾಷ್ಟ್ರಗಳು ಮತಯಂತ್ರ ಬಳಕೆ ತಿರಸ್ಕರಿಸಿ ಮತ ಪತ್ರದ ವ್ಯವಸ್ಥೆಯನ್ನೇ ಮುಂದುವರಿಸಿಕೊಂಡು ಹೋಗುತ್ತಿವೆ. ನಮ್ಮ ದೇಶದಲ್ಲಿ ಕೂಡ ಮತಯಂತ್ರವನ್ನು ತಿರಸ್ಕರಿಸಿ ಬ್ಯಾಲೆಟ್ ಪೇಪರನ್ನೇ ಬಳಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮೇಯರ್ ಪುಷ್ಪಲತಾ ಜಗನ್ನಾಥ್, ಮಾಜಿ ಮೇಯರ್ ಮೋದಾಮಣಿ, ಮಾಜಿ ಉಪಮೇಯರ್ ಚಂದ್ರಕಲಾ, ಮಹಿಳಾ ಕಾಂಗ್ರೆಸ್ ಮುಖಂಡರಾದ ಡಾ.ಸುಜಾತಾರಾವ್, ಲತಾಮೋಹನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News