ಮೈಸೂರು: ಕಸ ತೆಗೆದು ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ

Update: 2019-06-25 17:50 GMT

ಮೈಸೂರು,ಜೂ.24: ಮೈಸೂರು ನಗರವು ಮತ್ತೊಮ್ಮೆ ಸ್ವಚ್ಛ ನಗರಿ ಎಂಬ ಹೆಸರು ಪಡೆದುಕೊಳ್ಳುವ ನಿಟ್ಟಿನಲ್ಲಿ ನಗರ ಪಾಲಿಕೆ ಸಿಬ್ಬಂದಿಗಳು ವರ್ಷದ ಎಲ್ಲಾ ದಿವಸಗಳಲ್ಲೂ ಪ್ರತಿಯೊಂದು ವಾರ್ಡ್‍ಗಳ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯ ಮಾಡಬೇಕು ಹಾಗೂ ನಗರವು ಸ್ವಚ್ಛವಾಗಲು ಸಾರ್ವಜನಿಕರು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಹೇಳಿದರು.

ಮೈಸೂರು ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ ಬುಧವಾರ ಸ್ವಚ್ಚತಾ ದಿವಸ-2020 ಕಾರ್ಯಕ್ರಮಕ್ಕೆ ಇಂದು ಕಸ ತೆಗೆದು ಸ್ವಚ್ಛತೆ ಮಾಡುವ ಮೂಲಕ ಅವರು ಚಾಲನೆ ನೀಡಿದರು.

ಸ್ವಚ್ಛತಾ ದಿವಸ ಕಾರ್ಯಕ್ರಮವು ಪ್ರತಿಯೊಂದು ವಾರ್ಡ್‍ಗಳಲ್ಲಿ ಒಂದು ವರ್ಷ ಪೂರ್ತಿ ಪ್ರತಿ ಬುಧವಾರ ಸ್ವಚ್ಛತಾ ಕಾರ್ಯ ನಡೆಸುವ ಉದ್ದೇಶ ಹೊಂದಿದ್ದು, ಮುಂದಿನ ವರ್ಷದಲ್ಲಿ ಮೈಸೂರು ನಗರವನ್ನು ಸ್ವಚ್ಛ ನಗರಿ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿಸುವುದು ಹಾಗೂ ಸ್ವಚ್ಛತೆಯಿಂದ ಎಲ್ಲರ ಆರೋಗ್ಯ ಕಾಪಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ಮೈಸೂರು ಮಹಾ ನಗರ ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್ ಅವರು ನಗರವನ್ನು ಕಸಮುಕ್ತವನ್ನಾಗಿಸಲು ಈಗಿನಿಂದಲೇ ಪ್ರತಿಯೊಂದು ವಾರ್ಡ್‍ಗಳಲ್ಲಿ  ಬುಧವಾರ ಸ್ವಚ್ಛತಾ ದಿವಸ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪಾಲಿಕೆಯ ಜೊತೆಯಲ್ಲಿ ನಗರದ ನಾಗಿರಿಕರು ಸಹಕರಿಸಿ ಮೈಸೂರನ್ನು ಸ್ವಚ್ಛನಗರಿ ಮಾಡೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಪುಷ್ಪಲತಾ ಜಗನ್ನಾಥ್, ಮೈಸೂರು ಮಹಾನಗರ ಪಾಲಿಕೆ ಉಪ ಮಹಾಪೌರಾದ ಶಫೀ ಅಹಮದ್, ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ಮೈಸೂರು ಮಹಾ ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾದ ಶಿವಾನಂದಮೂರ್ತಿ ಹಾಗೂ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News