ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪುನಾರಾರಂಭಕ್ಕೆ ಕೇಂದ್ರ ಸಚಿವರಿಗೆ ಈಶ್ವರಪ್ಪ ಮನವಿ

Update: 2019-06-25 18:25 GMT

ಶಿವಮೊಗ್ಗ, ಜೂ. 25: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಯನ್ನು ಪುನಾರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಕೇಂದ್ರ ನಾಗರೀಕ ವಿಮಾನ ಯಾನ ಖಾತೆ ರಾಜ್ಯ ಸಜಿವ ಹರ್ದೀಪ್ ಸಿಂಗ್ ಪುರಿಯವರಿಗೆ ದಿಲ್ಲಿಯಲ್ಲಿ ಮನವಿ ಪತ್ರ ಅರ್ಪಿಸಿದ್ದಾರೆ. 

ಶಿವಮೊಗ್ಗದಲ್ಲಿ ವಿಮಾನಯಾನ ಸೇವೆ ಆರಂಭವಾದರೆ ಈ ಭಾಗದ ಕೈಗಾರಿಕೆ, ಶಿಕ್ಷಣ, ವೈದ್ಯಕೀಯ ಮತ್ತು ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ದಿಯಾಗಲಿದೆ ಎಂದು ಸಚಿವರಿಗೆ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸಚಿವರು, ಈ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಉಪಸ್ಥಿತರಿದ್ದರು. 

ಫಾರ್ಮ ಹಬ್‍ಗೆ ಮನವಿ: ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಕೈಗಾರಿಕ ಘಟಕಗಳು ಸ್ಥಾಪನೆಯಾಗಬೇಕು. ಈ ಭಾಗದ ವಿದ್ಯಾವಂತ ಯುವಕ-ಯುವತಿಯರಿಗೆ ಇಲ್ಲಿಯೇ ಉದ್ಯೋಗ ದೊರೆಯುವಂತಾಗಬೇಕು. ಈ ಕಾರಣದಿಂದ ಔಷಧ ಉತ್ಪಾದನಾ ಕಾರ್ಖಾನೆಗಳ ಸಮುಚ್ಛಯ ಸ್ಥಾಪಿಸಬೇಕು ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಸದಾನಂದಗೌಡರಿಗೆ ಕೆ.ಎಸ್.ಈಶ್ವರಪ್ಪ ಅವರು ಮನವಿ ಪತ್ರ ಅರ್ಪಿಸಿದ್ದಾರೆ. 

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಈ ಕಾರ್ಖಾನೆಗಳ ಸಮುಚ್ಛಯದ ಅನಿವಾರ್ಯತೆಯ ಕುರಿತು ಕೇಂದ್ರ ಸಚಿವರಿಗೆ ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಔಷಧಿ ಉತ್ಪಾದನ ಕಾರ್ಖಾನೆಗಳ ಸಂಘಟನೆಯ ಪದಾದಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಮನವಿಗೆ ಸ್ವೀಕರಿಸಿ ಕೇಂದ್ರ ಸಚಿವರು ಮಾತನಾಡಿ, ಸುಮಾರು 200 ಎಕರೆ ಭೂಪ್ರದೇಶ ಈ ಸಮುಚ್ಛಯ ನಿರ್ಮಾಣಕ್ಕೆ ಬೇಕಾಗಲಿದೆ. ಇದರ ಮೂಲಕ ಈ ಭಾಗದ ಅನೇಕರಿಗೆ ವಿಫುಲ ಉದ್ಯೋಗಾವಕಾಶ ದೊರೆಯಲಿದ್ದು, ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದರು.  

'ಈ ಉದ್ದೇಶಕ್ಕೆ ಬೇಕಾಗುವ ಭೂ ಪ್ರದೇಶವನ್ನು ಗುರುತಿಸುವ ಸಲುವಾಗಿ ಬರುವ 27 ರ ಗುರುವಾರದಂದು ಕರ್ನಾಟಕ ರಾಜ್ಯ ಕೈಗಾರಿಕ ಸಚಿವ ಕೆ.ಜೆ.ಜಾರ್ಜ್ ಅವರೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು' ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News