ಜಾರ್ಖಂಡ್: ಗುಂಪಿನಿಂದ ಹತ್ಯೆಗೀಡಾದ ತಬ್ರೇಝ್ ತಂದೆಯೂ ಇದೇ ರೀತಿ ಕೊಲೆಯಾಗಿದ್ದರು!

Update: 2019-06-26 03:37 GMT
ತಬ್ರೇಝ್ ಅನ್ಸಾರಿ

ಖರ್ಸವಾನ್, ಜೂ.26: ಸೆರೈಕೇಲಾ ಖರ್ಸವಾನ್‌ನಲ್ಲಿ ಜೂನ್ 17ರಂದು ಗುಂಪಿನಿಂದ ಹಲ್ಲೆಗೊಳಲಾಗಿ ಕೆಲ ದಿನಗಳ ಬಳಿಕ ಮೃತಪಟ್ಟ ತಬ್ರೇಝ್ ಅನ್ಸಾರಿಯವರ ತಂದೆ ಮಸ್ಕೂರ್ ಅನ್ಸಾರಿ ಕೂಡಾ 15 ವರ್ಷಗಳ ಹಿಂದೆ ಇಂಥದ್ದೇ ಘಟನೆಯಲ್ಲಿ ಹತ್ಯೆಯಾಗಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ಮಸ್ಕೂರ್ ಅವರನ್ನೂ ಜೆಮ್‌ಶೆಡ್‌ಪುರ ಬಳಿಯ ಬಗ್ಬೇರಾ ಎಂಬಲ್ಲಿ ಗುಂಪು ಕಳ್ಳತನದ ಆರೋಪದಲ್ಲಿ ಹಿಡಿದು ಥಳಿಸಿ ಹತ್ಯೆ ಮಾಡಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ಪೊಲೀಸರು ಇದೀಗ ಘಟನೆಯ ವಿವರಗಳನ್ನು ಕಲೆ ಹಾಕುತ್ತಿದ್ದಾರೆ. ಈ ಬಗ್ಗೆ ಬಗ್ಬೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಗ್ಬೇರಾ ಘಟನೆ ಬಳಿಕ ತಾವು ಜೆಮ್‌ಶೆಡ್‌ಪುರಕ್ಕೆ ತೆರಳಿ ಮಸ್ಕೂರ್ ಅವರ ಮೃತದೇಹವನ್ನು ಗ್ರಾಮಕ್ಕೆ ತಂದಿದ್ದಾಗಿ ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೊಸಹಿದ್ ಖಾನ್ ಹೇಳಿದ್ದಾರೆ.

ತನಿಖಾ ಸಂಸ್ಥೆಗಳ ವಿಚಾರಣೆ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಹೆಸರು ಬಹಿರಂಗಪಡಿಸಲು ಇಚ್ಛಿಸದ 70ರ ಹರೆಯದ ಆಸುಪಾಸಿನ ಇಬ್ಬರು ವ್ಯಕ್ತಿಗಳು ಕೂಡಾ ಖಾನ್ ಅವರ ಹೇಳಿಕೆಯನ್ನು ಸಮರ್ಥಿಸುವ ಹೇಳಿಕೆ ನೀಡಿದ್ದಾರೆ. ಮಸ್ಕೂರ್ ಅವರೂ ಇದೇ ರೀತಿ ಹತ್ಯೆಗೀಡಾಗಿದ್ದರು. "ಅವರನ್ನು ಕೂಡಾ ಗುಂಪು ಹಿಡಿದು ಥಳಿಸಿ ಕುತ್ತಿಗೆ ಸೀಳಿ ಹತ್ಯೆ ಮಾಡಿತ್ತು. ಅವರ ದೇಹವನ್ನು ಗ್ರಾಮಕ್ಕೆ ತಂದಾಗ ನಾವು ಇಲ್ಲಿದ್ದೆವು" ಎಂದು ಜಾಮಾ ಮಸೀದಿ ರಸ್ತೆಯಲ್ಲಿ ವಾಸಿಸುವ ಹಿರಿಯ ಮಹಿಳೆಯರೊಬ್ಬರು ಹೇಳಿದ್ದಾರೆ. ಇವರ ಮನೆ ತಬ್ರೇಝ್ ನಿವಾಸದಿಂದ 100 ಮೀಟರ್ ದೂರದಲ್ಲಿದೆ.

ಹಲವು ಮಂದಿ 2004ರಲ್ಲಿ ಬಗ್ಬೇರಾದಲ್ಲಿ ನಡೆದ ಈ ಘಟನೆಯನ್ನು ವಿಭಿನ್ನವಾಗಿ ನೆನಪಿಟ್ಟುಕೊಂಡಿದ್ದಾರೆ. ಸ್ಥಳೀಯ ಮುಖಂಡ ಮತ್ತು ಸಾಮಾಜಿಕ ಕಾರ್ಯಕರ್ತ ಸುಬೋಧ್ ಕುಮಾರ್ ಝಾ ಹೇಳುವಂತೆ, "ಒಂದು ದಿನ ಬಗ್ಬೇರಾದಲ್ಲಿರುವ ರಾಮನಗರ ಪ್ರದೇಶದ ಜನರ ಗುಂಪು ವ್ಯಕ್ತಿಯೊಬ್ಬರನ್ನು ಹಿಡಿದು ಥಳಿಸಿ ಹತ್ಯೆ ಮಾಡಿತ್ತು" ಎಂದು ನೆನಪಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News