“ಭಾರತವನ್ನು ಚಿಂದಿ ಚೂರಾಗಿಸಲಾಗುತ್ತಿದೆ”

Update: 2019-06-26 07:17 GMT

ಹೊಸದಿಲ್ಲಿ, ಜೂ.26: ಸಂವಿಧಾನ ಅಪಾಯದಲ್ಲಿದೆ ಹಾಗೂ ಭಾರತವನ್ನು ಚಿಂದಿ ಚೂರಾಗಿಸಲಾಗುತ್ತಿದೆ ಎಂದು ಲೋಕಸಭೆಯಲ್ಲಿ ತಮ್ಮ ಪ್ರಥಮ ಭಾಷಣದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೊಯಿತ್ರ ಆಡಳಿತ ಬಿಜೆಪಿ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಪಶ್ಚಿಮ ಬಂಗಾಳದ ಕೃಷ್ಣಾನಗರ ಕ್ಷೇತ್ರದ ಸಂಸದೆಯಾಗಿರುವ ಮೊಯಿತ್ರ ಆಡಳಿತ ಪಕ್ಷ ಸದಸ್ಯರ ಅಪಸ್ವರಗಳ ನಡುವೆಯೇ  “ಭಾರತದಲ್ಲಿ ಫ್ಯಾಸಿಸಂ  ಬೆಳೆಯುತ್ತಿರುವ ಅಪಾಯವಿದೆ'' ಎಂಬುದಕ್ಕೆ ಏಳು ಸಂಕೇತಗಳನ್ನು ಪಟ್ಟಿ ಮಾಡಿದರು. ಈ ಏಳು ಸಂಕೇತಗಳು ಅಮೆರಿಕಾದ ಹೋಲೋಕಾಸ್ಟ್ ಮ್ಯೂಸಿಯಂನ ಲಾಬಿಯಲ್ಲಿನ ಪೋಸ್ಟರ್ ನಲ್ಲಿದೆ ಎಂಬುದನ್ನೂ ಅವರು ಹೇಳಿದರು.

ರಾಷ್ಟ್ರಪತಿಗಳ ಭಾಷಣಕ್ಕೆ  ಧನ್ಯವಾದ ನಿಲುವಳಿ ಮಂಡನೆಗೆ ವಿರೋಧಿಸಿ ಮಾತನಾಡಿದ ಆಕೆ, ಬಿಜೆಪಿಯ ಅಭೂತಪೂರ್ವ ವಿಜಯವನ್ನು ಉಲ್ಲೇಖಿಸುತ್ತಾ ಈ  ಬೃಹತ್ ಗೆಲುವು ಅಸಮ್ಮತಿಯ ದನಿಗಳನ್ನು ಕೇಳುವ ಅಗತ್ಯವನ್ನು ಒತ್ತಿ ಹೇಳುತ್ತದೆ ಎಂದಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಮೌಲಾನ ಅಬುಲ್ ಕಲಾಂ ಆಜಾದ್ 1940ರಲ್ಲಿ ಕಾಂಗ್ರೆಸ್ ಪಕ್ಷದ ರಾಮಘರ್ ಅಧಿವೇಶನವನ್ನುದ್ದೇಶಿಸಿ ಮಾತನಾಡುತ್ತಾ ``ಹಲವಾರು  ಸಂಸ್ಕೃತಿ, ಧರ್ಮಗಳು ಆಕೆಯ ಬಳಿ ಹರಿಯಬೇಕು ಹಾಗೂ  ಆಕೆಯ ನೆಲದಲ್ಲಿ ನೆಲೆಯೂರಬೇಕೆಂಬುದು ಭಾರತದ ಐತಿಹಾಸಿಕ ವಿಧಿಯಾಗಿದೆ. ನಮ್ಮ ಸಂಸ್ಕೃತಿಗಳು, ಭಾಷೆಗಳು, ಕವನಗಳು, ಸಾಹಿತ್ಯ ಹಾಗೂ ನಮ್ಮ ಕಲೆ ಹೀಗೆ  ನಮ್ಮ ದೈನಂದಿನ ಜೀವನದ ಹಲವಾರು ಆಗುಹೋಗುಗಳು ನಮ್ಮ ಜಂಟಿ ಉದ್ದೇಶದ  ದ್ಯೋತಕವಾಗಬೇಕು'' ಎಂದಿದ್ದರೆಂಬುದುನ್ನು ಉಲ್ಲೇಖಿಸಿ ಈ ಸಿದ್ಧಾಂತ ನಮ್ಮ ಸಂವಿಧಾನದಲ್ಲಿ ಅಡಕವಾಗಿದ್ದರೂ ಹಾಗೂ ಪ್ರತಿಯೊಬ್ಬ ಸಂಸದ ಅದನ್ನು ರಕ್ಷಿಸಲು ಪ್ರತಿಜ್ಞೆಗೈದಿದ್ದರೂ ಅದು ಬಂಧನದಲ್ಲಿದೆ ಎಂದು ಹೇಳುತ್ತಾ  ಏಕೆಂದು ಅವರು ವಿವರಣೆ ನೀಡಿದ್ದಾರೆ.

1. ಕೃತಕ ರಾಷ್ಟ್ರಭಕ್ತಿ: ದೇಶದಲ್ಲಿ 50 ವರ್ಷದಿಂದ ವಾಸವಿದ್ದೇವೆ ಎಂದು ಜನರು ಸಾಕ್ಷ್ಯ ಪ್ರಸ್ತುತಪಡಿಸಬೇಕಾಗಿರುವ  ಅಸ್ಸಾಂನ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್  ಅನ್ನು ಉಲ್ಲೇಖಿಸಿದ ಅವರು ಸಚಿವರುಗಳಿಗೆ ತಾವು ಪಡೆದ ಡಿಗ್ರಿಗಳನ್ನು ಪ್ರಸ್ತುತಪಡಿಸಲಾಗುತ್ತಿಲ್ಲ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವೆ ಸ್ಮೃತಿ ಇರಾನಿಯ ಶೈಕ್ಷಣಿಕ ಅರ್ಹತೆಯ ಬಗೆಗಿರುವ ಊಹಾಪೋಹಗಳನ್ನು ಈ ಮೂಲಕ ಅವರು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆನ್ನಲಾಗಿದೆ.

2. ಮಾನವ ಹಕ್ಕುಗಳ ಬಗ್ಗೆ ಅಸಡ್ಡೆ: “ದೇಶದಲ್ಲಿನ ದ್ವೇಷದ ಅಪರಾಧಗಳು 2014 ಹಾಗೂ 2019ರ ನಡುವೆ ಹತ್ತು ಪಟ್ಟು ಹೆಚ್ಚಾಗಿದೆ'' ಎಂದ ಅವರು, “ಇದು ಇ-ಕಾಮರ್ಸ್ ಸ್ಟಾರ್ಟ್-ಅಪ್ ಮೌಲ್ಯಮಾಪನದಂತೆ, ಈ ಸಂಖ್ಯೆಯನ್ನು  ಹೆಚ್ಚಿಸಲು  ದೇಶದಲ್ಲಿ ಕೆಲ ಶಕ್ತಿಗಳು ಪ್ರಯತ್ನಿಸುತ್ತಿವೆ'' ಎಂದಿದ್ದಾರೆ.

3. ಮಾಧ್ಯಮಗಳ ನಿಯಂತ್ರಣ:  ದೇಶದ ಐದು ಅತ್ಯಂತ ದೊಡ್ಡ ಮಾಧ್ಯಮ ಸಂಸ್ಥೆಗಳು “ನೇರವಾಗಿ ಅಥವಾ ಪರೋಕ್ಷವಾಗಿ ಒಬ್ಬ ವ್ಯಕ್ತಿಯ ಹಿಡಿತದಲ್ಲಿದೆ'' ಎಂದು ಮೊಯಿತ್ರ ಆರೋಪಿಸಿದ್ದಾರೆ. ನಕಲಿ ಸುದ್ದಿ ಸಾಮಾನ್ಯವಾಗಿದೆ ಎಂದು ಅವರು ಹೇಳಿದರು.

4. ರಾಷ್ಟ್ರೀಯ ಸುರಕ್ಷೆ ಬಗ್ಗೆ ಮೋಹ: ರಾಷ್ಟ್ರೀಯ ಸುರಕ್ಷೆಯ ಬಗ್ಗೆ ಅತಿಯಾದ ಮೋಹ ಹಾಗೂ ವೈರಿಗಳನ್ನು ಗುರುತಿಸುವುದು ಎಲ್ಲೆಡೆ ಭೀತಿಯ ವಾತಾವರಣ ಪಸರಿಸಿದೆ ಎಂದ ಮೊಯಿತ್ರ, ``ಸೇನೆಯ ಸಾಧನೆಗಳನ್ನು ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಕಿತ್ತುಕೊಳ್ಳಲಾಗಿದೆ'' ಎಂದರು.

5. ಧರ್ಮ ಮತ್ತು ಸರಕಾರದ ಜತೆಯಾಟ: ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ದೋಷಗಳನ್ನು ಬೊಟ್ಟು ಮಾಡಿದ ಅವರು, “ವಲಸಿಗ ವಿರೋಧಿ ಕಾನೂನಿನನ್ವಯ ಕೇವಲ ಒಂದು ಸಮುದಾಯ ಟಾರ್ಗೆಟ್ ಆಗುವಂತೆ ನೋಡಿಕೊಳ್ಳಲಾಗಿದೆ'' ಎಂದರು.

6. ಬುದ್ಧಿಜೀವಿಗಳು ಹಾಗೂ ಕಲೆ ಕುರಿತಾದ ಅಸಡ್ಡೆ: ಇದು ಅಪಾಯದ ಸಂಕೇತ ಎಂದ ಅವರು ಎಲ್ಲಾ ವಿಧದ ಅಸಮ್ಮತಿಯನ್ನು ಅದುಮಲಾಗುತ್ತಿದೆ ಎಂದು ದೂರಿದರು.

7. ಚುನಾವಣಾ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯದ ಅವನತಿ: ಪ್ರಮುಖ ಅಧಿಕಾರಿಗಳನ್ನು ವರ್ಗಾಯಿಸಲು ಚುನಾವಣಾ ಆಯೋಗವನ್ನು ಬಳಸಲಾಗಿದೆ ಎಂದು ಅವರು ``ಈ ಚುನಾವಣೆಯಲ್ಲಿ ಒಟ್ಟು ರೂ. 60,000 ಕೋಟಿ ಖರ್ಚು ಮಾಡಿದ್ದರೆ ಸುಮಾರು ಶೇ 50ರಷ್ಟು, ಅಂದರೆ ರೂ. 27,000 ಕೋಟಿಯನ್ನು ಒಂದು ಪಕ್ಷ ವೆಚ್ಚ ಮಾಡಿದೆ,'' ಎಂದಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News