ಕಳಸ ತಾಲೂಕು ಕೇಂದ್ರಕ್ಕೆ ಕುದುರೆಮುಖ ಟೌನ್‍ಶಿಪ್ ಬಳಕೆ: ಜಿಲ್ಲಾಡಳಿತದ ನಿಲುವಿಗೆ ಸಾರ್ವಜನಿಕರ ವ್ಯಾಪಕ ಆಕ್ರೋಶ

Update: 2019-06-26 16:33 GMT

ಚಿಕ್ಕಮಗಳೂರು, ಜೂ.26: ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿರುವ ಕಳಸ ಹೋಬಳಿ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಕಳಸ ಹೋಬಳಿ ಕೇಂದ್ರ ತಾಲೂಕು ಕೇಂದ್ರದಿಂದ ಸುಮಾರು 60 ಕಿ.ಮೀ. ದೂರದಲ್ಲಿದೆ. ಈ ಕಾರಣಕ್ಕೆ ಕಳಸ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂದು ಇಲ್ಲಿನ ಸಾರ್ವಜನಿಕರು, ರೈತರು, ಹೋರಾಟಗಾರು ಸುಮಾರು 40 ವರ್ಷಗಳಿಂದ ಹೋರಾಟ ನಡೆಸಿದ್ದಾರೆ. ಈ ಹೋರಾಟದ ಫಲವಾಗಿ ಇತ್ತೀಚೆಗೆ ಸಮ್ಮಿಶ್ರ ಸರಕಾರ ಮಂಡಿಸಿದ ಬಜೆಟ್‍ನಲ್ಲಿ ಕಳಸಕ್ಕೆ ತಾಲೂಕು ಕೇಂದ್ರದ ಸ್ಥಾನಮಾನ ನೀಡಿದೆ. 

ಸದ್ಯ ಕಳಸ ತಾಲೂಕು ಕೇಂದ್ರಕ್ಕೆ ಮೂಲಸೌಕರ್ಯಗಳನ್ನು ಕಲ್ಪಿಸುವ ಜವಬ್ದಾರಿ ಜಿಲ್ಲಾಡಳಿತದ ಮೇಲಿದ್ದು, ಈ ತಾಲೂಕು ಕೇಂದ್ರಕ್ಕೆ ಅಗತ್ಯವಾಗಿರುವ ಸರಕಾರಿ ಕಚೇರಿಗಳ ಆರಂಭಕ್ಕೆ ಕುದುರೆಮುಖದಲ್ಲಿ ಪಾಳು ಬಿದ್ದಿರುವ ಸರಕಾರಿ ಕಟ್ಟಡಗಳ ಬಳಕೆಗೆ ಜಿಲ್ಲಾಡಳಿತ ಮುಂದಾಗಿದ್ದು, ಈ ಸಂಬಂಧ ಸರಕಾರಕ್ಕೆ ಪ್ರಸ್ತಾವ ಕಳಿಸಿದೆ. ಆದರೆ ಜಿಲ್ಲಾಡಳಿತ ಈ ಕ್ರಮ ಏಕಪಕ್ಷೀಯ ನಿರ್ಣಯವಾಗಿದ್ದು, ಯಾವುದೇ ಕಾರಣಕ್ಕೂ ಸರಕಾರಿ ಕಚೇರಿಗಳನ್ನು ಬೇರೆಡೆ ಆರಂಭಿಸಬಾರದೆಂಬ ಈ ಹೊಸ ತಾಲೂಕು ಕೇಂದ್ರದ ಜನತೆ ಹಾಗೂ ಹೋರಾಟಗಾರರು ಧ್ವನಿ ಎತ್ತಿದ್ದಾರೆ.

ಕಳಸ ಪಟ್ಟಣ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ತಾಲೂಕು ಕೇಂದ್ರದಿಂದ ಈ ಪಟ್ಟಣ ಸುಮಾರು 60 ಕಿ.ಮೀ.ದೂರದಲ್ಲಿದ್ದು, ಕಳಸ ಹೋಬಳಿ ಕೇಂದ್ರದ ವ್ಯಾಪ್ತಿಯಲ್ಲಿರುವ ಎಸ್.ಕೆಬಾರ್ಡರ್ ನಿಂದ ಮೂಡಿಗೆರೆ ಪಟ್ಟಣ ಸುಮಾರು 90 ಕಿ.ಮೀ ದೂರದಲ್ಲಿದೆ. ಕಂದಾಯ ಇಲಾಖೆಯ ದಾಖಲೆಗಳೂ ಸೇರಿದಂತೆ ಇತರ ಇಲಾಖೆಗಳ ಸಣ್ಣ ಕೆಲಸಕ್ಕೂ ಇಲ್ಲಿನ ಗುಡ್ಡಗಾಡು ಜನರು ಹಾಗೂ ಸಾರ್ವಜನಿಕರು ಸಾವಿರಾರು ರೂ. ಖರ್ಚು ಮಾಡಿಕೊಂಡು ಮೂಡಿಗೆರೆ ಪಟ್ಟಣಕ್ಕೆ ಬಂದು ದಿನವಿಡಿ ಕಾಯಬೇಕಿತ್ತು. ಈ ಕಾರಣಕ್ಕೆ ಇಲ್ಲಿನ ಸಾರ್ವಜನಿಕರು, ರೈತರು ಹಾಗೂ ವಿವಿಧ ಪಕ್ಷಗಳ ಹೋರಾಟಗಾರರು ಕಳಸ ಹೋಬಳಿಯನ್ನೇ ತಾಲೂಕು ಕೇಂದ್ರ ಮಾಡಬೇಕೆಂದು ಸುಮಾರು 40 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಈ ಹೋರಾಟಕ್ಕೆ ಸಿಕ್ಕ ಜಯ ಎಂಬಂತೆ ರಾಜ್ಯದ ಸಮ್ಮಿಶ್ರ ಸರಕಾರ ಇತ್ತೀಚೆಗೆ ಕಳಸ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವೆಂದು ಘೋಷಣೆ ಮಾಡಿ ಇಲ್ಲಿನ ಜನರ ಸಮಸ್ಯೆಗಳ ಪರಿಹಾರ ಹಾಗೂ ಅಭಿವೃದ್ಧಿಗೆ ಒತ್ತು ನೀಡಿದೆ.

ಇದೀಗ ಹೊಸದಾಗಿ ರೂಪುಗೊಂಡಿರುವ ತಾಲೂಕು ಕೇಂದ್ರದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಮುಂದಾಗಿದ್ದು, ಇಲ್ಲಿನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು, ತಾಲೂಕು ಕೇಂದ್ರದಲ್ಲಿ ಅತ್ಯಗತ್ಯವಾಗಿರುವ ತಾಲೂಕು ಕಚೇರಿ ಸೇರಿದಂತೆ ವಿವಿಧ ಸರಕಾರಿ ಇಲಾಖೆಗಳ ಕಚೇರಿಗಳನ್ನು ಕಳಸ ಪಟ್ಟಣದಲ್ಲೇ ಆರಂಭಿಸುವ ಬದಲಾಗಿ ಹೋಬಳಿ ವ್ಯಾಪ್ತಿಗೊಳಪಟ್ಟಿರುವ ಪ್ರಸಕ್ತ ಪಾಳು ಬಿದ್ದಿರುವ ಕುದುರೆಮುಖ ಪಟ್ಟಣದ ಟೌನ್‍ಶಿಪ್‍ಅನ್ನು ಬಳಕೆ ಮಾಡುವ ಚಿಂತನೆ ನಡೆಸಿ ಈ ಸಂಬಂಧ ಸರಕಾರಕ್ಕೆ ಶೀಘ್ರ ಸರಕಾರಕ್ಕೆ ಪ್ರಸ್ತಾವ ಕಳಿಸಲಿದ್ದಾರೆಂದು ತಿಳಿದು ಬಂದಿದೆ. ಈ ವಿಚಾರವನ್ನು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಇತ್ತೀಚೆಗೆ ಜಿಲ್ಲಾಪಂಚಾಯತ್ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಸಮ್ಮುಖದಲ್ಲಿ ಪ್ರಸ್ತಾಪಿಸಿದ್ದು, ಪ್ರಸ್ತಾವ ಕಳಿಸಲು ತಡ ಮಾಡುತ್ತಿರುದೇಕೆ? ಶೀಘ್ರ ಕಳುಹಿಸಿ ಕೊಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕಳಸ ತಾಲೂಕು ಕೇಂದ್ರಕ್ಕೆ ಆಗತ್ಯವಾಗಿರುವ ಸರಕಾರಿ ಕಚೇರಿಗಳ ಆರಂಭಕ್ಕೆ ಕೆಐಒಸಿಎಲ್‍ನ ಪಾಳುಬಿದ್ದ ಟೌನ್‍ಶಿಪ್ ಬಳಕೆ ಮಾಡಿಕೊಳ್ಳಲು ಜಿಲ್ಲಾಡಳಿತ ಮುಂದಾಗಿರುವ ವಿಚಾರ ತಿಳಿಯುತ್ತಿದ್ದಂತೆ ಅತ್ತ ನೂತನ ತಾಲೂಕು ಕೇಂದ್ರದ ಸಂಭ್ರದಲ್ಲಿದ್ದ ಕಳಸ ತಾಲೂಕಿನ ಜನತೆ ಶಾಕ್‍ಗೆ ಒಳಗಾಗಿದ್ದು, ಕಳಸ ಪಟ್ಟಣದಲ್ಲೇ ತಾಲೂಕು ಕೇಂದ್ರದ ಮೂಲಸೌಕರ್ಯಗಳನ್ನು ಕಲ್ಪಿಸಲು ಸ್ಥಳಾವಕಾಶ ಇದ್ದರೂ 21 ಕಿ.ಮೀ. ದೂರದಲ್ಲಿರುವ ಕುದುರೆಮುಖದ ಟೌನ್‍ಶಿಪ್ ಬಳಕೆ ಮಾಡುತ್ತಿರುವುದೇಕೆಂದು ಪ್ರಶ್ನಿಸುತ್ತಿದ್ದಾರೆ. 

ಕಳಸ ಪಟ್ಟಣ ಮೂರು ಮತ್ತೊಂದು ರಸ್ತೆಗಳಲ್ಲಿ ಪವಡಿಸಿಕೊಂಡಿರುವ ಸಣ್ಣ ಪಟ್ಟಣವಾದರೂ ಸರಕಾರಿ ಕಚೇರಿಗಳ ನಿರ್ಮಾಣಕ್ಕೆ ಅಗತ್ಯವಾಗಿರುವ ಸರಕಾರಿ ಜಾಗ ಪಟ್ಟಣದಲ್ಲಿದೆ. ಪಟ್ಟಣದ ಹಳೇ ಬಸ್ ನಿಲ್ದಾಣ, ಸಂತೇ ಮೈದಾನದ ಸುತ್ತಮುತ್ತ ಸುಮಾರು 1 ಎಕರೆಯಷ್ಟು ಸರಕಾರಿ ಜಾಗವಿದ್ದು, ಈ ಜಾಗದಲ್ಲೇ ತಾಲೂಕು ಕಚೇರಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಅಗತ್ಯವಿರುವ ಕಟ್ಟಡಗಳ ನಿರ್ಮಾಣ ಮಾಡಬಹುದು. ಆದರೆ ಜಿಲ್ಲಾಡಳಿತ ಈ ಸಂಬಂಧ ಸಾರ್ವಜನಿಕರು, ಸಂಘಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರ ಅಭಿಪ್ರಾಯ ಸಂಗ್ರಹಿಸದೇ ಕುದುರೆಮುಖದಲ್ಲಿ ತಾಲೂಕು ಕೇಂದ್ರದ ಕಚೇರಿಗಳನ್ನು ಆರಂಭಿಸಲು ಮುಂದಾಗಿರುವುದು ಏಕಪಕ್ಷೀಯ ನಿರ್ಣಯವಾಗಿದೆ ಎಂದು ಕಿಡಿಕಾರುತ್ತಿರುವುದಲ್ಲದೇ ಜಿಲ್ಲಾಡಳಿತ ಈ ನಿಲುವಿನ ವಿರುದ್ಧ ಹೋರಾಟಕ್ಕೂ ಅಣಿಯಾಗುತ್ತಿದ್ದಾರೆ.

ಕಳಸ ತಾಲೂಕು ಕೇಂದ್ರದ ಬೇಡಿಕೆಯ ಹೋರಾಟ ರೂಪುಗೊಂಡಿದ್ದೇ ಮೂಡಿಗೆರೆ ತಾಲೂಕು ಕೇಂದ್ರ ಕಳಸ ಹೋಬಳಿಕೇಂದ್ರದಿಂದ ದೂರದಲ್ಲಿರುವ ಕಾರಣದಿಂದಾಗಿ. ಕಳಸ ಹೋಬಳಿ ವ್ಯಾಪ್ತಿಯ ಜನರು ಸಾವಿರಾರು ರೂ. ಖರ್ಚು ಮಾಡಿಕೊಂಡು ಮೂಡಿಗೆರೆ ಪಟ್ಟಣಕ್ಕೆ ಅಲೆದಾಡುವ ಸಮಸ್ಯೆಯಿಂದ ಪಾರಾಗಲು ಕಳಸ ತಾಲೂಕು ಕೇಂದ್ರ ಘೋಷಣೆಯೊಂದೇ ಮಾರ್ಗ ಎಂಬ ಕಾರಣಕ್ಕೆ 40 ವರ್ಷಗಳಿಂದ ಈ ಸಂಬಂಧ ಹೋರಾಟ ನಡೆಸಲಾಗಿದೆ. ಇದೀಗ ಕಳಸಕ್ಕೆ ತಾಲೂಕು ಕೇಂದ್ರದ ಸ್ಥಾನಮಾನ ಧಕ್ಕಿದ್ದರೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ, ಜನನಿಬಿಡವಾಗಿರುವ ಹಾಗೂ ಶಿಥಿಲಾವಸ್ಥೆಯಲ್ಲಿರುವ ಟೌನ್‍ಶಿಪ್ ಬಳಕೆಯಿಂದಾಗಿ ಕಳಸ ಪಟ್ಟಣದ ಜನತೆ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿರುವ ಹಿರೇಬೈಲು, ಬಾಳೆಹೊಳೆ, ಕಗ್ಗನಳ್ಳ, ಹೆಮ್ಮಕ್ಕಿ, ಮೇರ್ತಿಕಾನ್, ಮರಸಣಿಗೆಯಂತಹ ಗ್ರಾಮಗಳ ಜನರು ಮತ್ತೆ 20-ರಿಂದ 50 ಕಿ.ಮೀ. ದೂರದ ಕುದುರೆಮುಖಕ್ಕೆ ಅಲೆದಾಡಬೇಕಾದ ಸಮಸ್ಯೆ ಎದುರಾಗಲಿದೆ ಎಂದು ಕಳಸ ಪಟ್ಟಣದ ಸಾರ್ವಜನಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಇದೆಲ್ಲಕ್ಕಿಂತ ಮುಖ್ಯವಾಗಿ ಹಿಂದೆ ಕುದುರೆಮುಖ ಗಣಿಗಾರಿಕೆ ನಡೆಸುತ್ತಿದ್ದ ಕೆಐಒಸಿಎಲ್ ಸಂಸ್ಥೆ ಇದೀಗ ಬಾಗಿಲು ಮುಚ್ಚಿ ಎರಡು ದಶಕ ಕಳೆಯುತ್ತಿದೆ. ಕುದುರೆಮುಖದಲ್ಲಿ ಸದ್ಯ ಕೇಂದ್ರೀಯ ವಿದ್ಯಾಲಯ, ಆಸ್ಪತ್ರೆ ಸೇರಿದಂತೆ ಸಾವಿರಾರು ವಸತಿಗೃಹಗಳು ಮಾತ್ರ ಇದ್ದು, ಇವೆಲ್ಲವೂ ಪ್ರಸಕ್ತ ಪಾಳು ಬಿದ್ದ ಕಟ್ಟಡಗಳಾಗಿವೆ. ಇನ್ನು ಕಳಸ ಹೋಬಳಿ ಕೇಂದ್ರಕ್ಕೆ ಸೇರಿರುವ ಸಂಸೆ ಜಾಂಬಳೆಯಂತಹ ಎಂದೆರೆಡು ಗ್ರಾಮಗಳು ಮಾತ್ರ ಕುದುರೆಮುಖ ಟೌನ್‍ಶಿಪ್‍ನ ಸಮೀಪದಲ್ಲಿದ್ದು, ಟೌನ್‍ಶಿಪ್ ಹೊರತುಪಡಿಸಿ ಉಳಿದೆಲ್ಲಾ ಕಂದಾಯ ಜಾಗವನ್ನು ಜಿಲ್ಲಾಡಳಿತ ಅರಣ್ಯ ಇಲಾಖೆಯ ಸುಪರ್ದಿಗೊಪ್ಪಿಸಿದೆ. ಸದ್ಯ ಕುದುರೆಮುಖದಲ್ಲಿ ಪೊಲೀಸ್ ಠಾಣೆ ಹಾಗೂ ಅರಣ್ಯ ಇಲಾಖೆಯ ಒಂದೆರೆಡು ಕಚೇರಿಗಳು ಬಿಟ್ಟರೆ ಬಹುತೇಕ ಕಟ್ಟಡಗಳು ಪಾಳು ಬಿದ್ದಿದ್ದು, ಟೌನ್‍ಶಿಪ್ ಸಂಪೂರ್ಣವಾಗಿ ಕಾಡಿನಿಂದ ಆವೃತವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ ಕಳಸ ತಾಲೂಕು ಕೇಂದ್ರವನ್ನು ಕುದುರೆಮುಖದಲ್ಲಿ ಆರಂಭಿಸಿದರೆ ಸರಕಾರಕ್ಕೆ ಆರ್ಥಿಕವಾಗಿ ನಷ್ಟವಾಗುವುದರೊಂದಿಗೆ ಜನರಿಗೂ ತೊಂದರೆಯಾಗಲಿದೆ. ಜಿಲ್ಲಾಡಳಿತ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದೇ ಏಕಪಕ್ಷೀಯವಾಗಿ ಕದುರೆಮುಖದಲ್ಲಿ ಯಾವುದೇ ಕಾರಣಕ್ಕೂ ತಾಲೂಕು ಕೇಂದ್ರದ ಕಚೇರಿಗಳನ್ನು ಆರಂಭಿಸಬಾರದು. ಕಳಸ ಪಟ್ಟಣದ ವ್ಯಾಪ್ತಿಯಲ್ಲೇ ತಾಲೂಕು ಕೇಂದ್ರವನ್ನಾರಂಭಿಸಲು ಕ್ರಮವಹಿಸಬೇಕೆಂದು ಸಾರ್ವಜನಿಕರು, ಹೋರಾಟಗಾರರು ಆಗ್ರಹಿಸಿದ್ದಾರೆ.

ಕಳಸ ತಾಲೂಕು ಕೇಂದ್ರಕ್ಕಾಗಿ 1981ರಿಂದಲೂ ಸಿಪಿಐ ಪಕ್ಷ ಜನರೊಂದಿಗೆ ಹೋರಾಟ ಕೈಗೊಂಡಿದೆ. ಸರಕಾರ ಇದೀಗ ತಾಲೂಕು ಕೇಂದ್ರದ ಘೋಷಣೆ ಮಾಡಿದ್ದರೂ ಜಿಲ್ಲಾಡಳಿತ ಕುದುರೆಮುಖದಲ್ಲಿ ಪಾಳು ಬಿದ್ದಿರುವ ಟೌನ್‍ಶಿಪ್ ಬಳಕೆ ಮಾಡಿಕೊಂಡು ಕಳಸ ಪಟ್ಟಣದಿಂದ 21 ಕಿಮೀ ದೂರದಲ್ಲಿರುವ ಅಲ್ಲಿ ತಾಲೂಕು ಕೇಂದ್ರಕ್ಕೆ ಮೂಲಸೌಕರ್ಯ ಕಲ್ಪಿಸಲು ಮುಂದಾಗಿರುವುದು ಪತ್ರಿಕೆಗಳ ಮೂಲಕ ತಿಳಿಯಿತು. ಜಿಲ್ಲಾಡಳಿತದ ಈ ಕ್ರಮ ಜನವರೋಧಿಯಾಗಿದ್ದು, ಜಿಲ್ಲಾಧಿಕಾರಿಯನ್ನು ಈ ಭಾಗದ ಮುಖಂಡರು ದಾರಿ ತಪ್ಪಿಸಿದ್ದರಿಂದ ಜಿಲ್ಲಾಧಿಕಾರಿ ಇಂತಹ ಜನವಿರೋಧಿ ಕ್ರಮಕ್ಕೆ ಮುಂದಾಗಿದ್ದಾರೆಂದು ಅನಿಸುತ್ತಿದೆ. ಈ ಭಾಗದ ಸಾರ್ವಜನಿಕರ ಅಭಿಪ್ರಾಯ ಕೇಳದೇ ಜಿಲ್ಲಾಧಿಕಾರಿ ಇಂತಹ ಅವೈಜ್ಞಾನಿಕ ನಿರ್ಣಯಕ್ಕೆ ಮುಂದಾಗಿರುವುದು ಸರಿಯಲ್ಲ. ಕಳಸ ತಾಲೂಕು ಕೇಂದ್ರಕ್ಕೆ ಕಳಸ ಪಟ್ಟಣದಲ್ಲೇ ಮೂಲಸೌಕರ್ಯ ಒದಗಿಸಬೇಕು. ಇದಕ್ಕೆ ಅಗತ್ಯವಾಗಿರುವ ಸರಕಾರಿ ಜಾಗ ಪಟ್ಟಣದ ವ್ಯಾಪ್ತಿಯಲ್ಲಿದೆ. ಈ ಸಂಬಂಧ ಜಿಲ್ಲಾಧಿಕಾರಿ ಕಳಸ ಪಟ್ಟಣದಲ್ಲಿ ಸಾರ್ವಜನಿಕರ ಸಭೆ ಕರೆಯಬೇಕು. ತಪ್ಪಿದಲ್ಲಿ ಪಕ್ಷದ ಜಿಲ್ಲಾಡಳಿತದ ವಿರುದ್ಧ ಚಳವಳಿಗೆ ಕರೆ ನೀಡಲಿದೆ.
- ಲಕ್ಷ್ಮಣ್ ಆಚಾರ್, ಸಿಪಿಐ ಹಿರಿಯ ಮುಖಂಡ, ಕಳಸ

ಕುದುರೆಮುಖ ಟೌನ್‍ಶಿಪ್‍ಅನ್ನು ಕಳಸ ತಾಲೂಕು ಕೇಂದ್ರದ ಸರಕಾರಿ ಕಚೇರಿಗಳಿಗೆ ಬಳಕೆ ಮಾಡುವ ಜಿಲ್ಲಾಡಳಿತದ ಕ್ರಮ ಏಕಪಕ್ಷೀಯ ನಿಲುವಾಗಿದೆ. ಇದುವರೆಗೂ ಸರಕಾರಿ ಇಲಾಖೆಗಳ ಸೌಲಭ್ಯ, ದಾಖಲೆಗಳಿಗಾಗಿ 60-90 ಕಿಮೀ ದೂರದ ಮೂಡಿಗೆರೆ ತಾಲೂಕು ಕಚೇರಿಗೆ ಇಲ್ಲಿನ ಜನರು ಅಲೆದಾಡುತ್ತಾ ಹೈರಾಣಾಗಿದ್ದಾರೆ. ಕುದುರೆಮುಖದಲ್ಲಿ ತಾಲೂಕು ಕೇಂದ್ರ ಆರಂಭಿಸಿದರೆ ಇಲ್ಲಿನ ಜನರ ಸಮಸ್ಯೆ ಮತ್ತೆ ಜೀವಂತವಾಗಿರುತ್ತದೆ. ಕಳಸ ಹೋಬಳಿಯ ಜನರು ತಮ್ಮ ಎಲ್ಲ ಕೆಲಸ ಕಾರ್ಯಗಳಿಗಾಗಿ ಕಳಸ ಪಟ್ಟಣವನ್ನೇ ಅವಲಂಬಿಸಿದ್ದು, ಕಳಸ ತಾಲೂಕು ಕೇಂದ್ರಕ್ಕೆ ಕಳಸ ಪಟ್ಟಣದಲ್ಲೇ ಮೂಲಸೌಕರ್ಯಗಳನ್ನು ಕಲ್ಪಿಸಬೇಕು.
- ಅಶೋಕ್, ವ್ಯಾಪಾರಿ, ಕಳಸ

ಕೆಲ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಸ್ವಾರ್ಥ ಹಾಗೂ ರಾಜಕೀಯ ಲಾಭಕ್ಕಾಗಿ ಜಿಲ್ಲಾಧಿಕಾರಿಯನ್ನು ದಾರಿ ತಪ್ಪಿಸಿ ಕುದುರೆಮುಖದಲ್ಲಿ ಕಳಸ ತಾಲೂಕು ಕೇಂದ್ರದ ಕಚೇರಿಗಳನ್ನು ಆರಂಭಿಸಲು ಮುಂದಾಗಿದ್ದಾರೆ. ಈ ಮೂಲಕ ಜನರ ಬಹುದಿನಗಳ ಕನಸಾಗಿದ್ದ ಕಳಸ ತಾಲೂಕು ಕೇಂದ್ರ ಬೇಡಿಕೆಯನ್ನು ನೆನೆಗುದಿಗೆ ಬೀಳುವಂತೆ ಮಾಡಲು ಹೊರಟಿದ್ದಾರೆ. ಜಿಲ್ಲಾಧಿಕಾರಿ ಅವರು ತಮ್ಮ ಕುದುರೆಮುಖ ಟೌನ್‍ಶಿಪ್ ಸಂಬಂಧ ಸರಕಾರಕ್ಕೆ ಪ್ರಸ್ತಾವ ಕಳಿಸಬಾರದು. ಕೂಡಲೇ ಈ ಸಂಬಂಧ ಸಾರ್ವಜನಿಕರ ಸಭೆ ಕರೆದು ಜನರ ಅಭಿಪ್ರಾಯದಂತೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು.
- ರಿಝ್ವಾನ್, ಕಾಂಗ್ರೆಸ್ ಮುಖಂಡ

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News