'ಓಎಲ್‍ಎಕ್ಸ್' ವಂಚಕರ ಮಾತು ನಂಬಿ ಸಾವಿರಾರು ರೂ. ಕಳೆದುಕೊಂಡ ವಿದ್ಯಾರ್ಥಿ

Update: 2019-06-26 17:08 GMT

ದಾವಣಗೆರೆ, ಜೂ.26: ಓಎಲ್‍ಎಕ್ಸ್ ಜಾಹೀರಾತು ನಂಬಿದ ವಿದ್ಯಾರ್ಥಿಯೊಬ್ಬ ವಂಚಕರ ಮಾತಿಗೆ ಕಿವಿಗೊಟ್ಟು 15,999 ರೂ. ಕಳೆದುಕೊಂಡ ಘಟನೆ ನಗರದಲ್ಲಿ ವರದಿಯಾಗಿದೆ.

ಇಲ್ಲಿನ ಆಂಜನೇಯ ಬಡಾವಣೆ ವಾಸಿ ವೈ.ಕೆ. ಕೌಶಿಕ್(23) ಹಣ ಕಳೆದುಕೊಂಡ ವಿದ್ಯಾರ್ಥಿ. ಜೂ.21ರಂದು ಬೆಳಗ್ಗೆ 10ರಿಂದ ಜೂ. 24ರ ರಾತ್ರಿ 10 ಗಂಟೆ ಅವಧಿಯಲ್ಲಿ ಕೌಶಿಕ್‍ಗೆ ಆನ್‍ಲೈನ್‍ನಲ್ಲಿ ವಂಚಕರು ಕಾರು ಮಾರಾಟ ಮಾಡುವುದಾಗಿ ನಂಬಿಸಿ, ವಂಚನೆ ಮಾಡಿರುವ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೌಶಿಕ್ ಜೂ.21ರಂದು ಓಎಲ್‍ಎಕ್ಸ್ ಜಾಹೀರಾತಿನಲ್ಲಿ ಕಾರು ಮಾರಾಟಕ್ಕಿದ್ದ ಬಗ್ಗೆ ಜಾಹೀರಾತು ಬಂದಿದೆ. ಅದರಲ್ಲಿದ್ದ ನಂಬರ್ ಗೆ ಕರೆ ಮಾಡಿ, ಕಾರನ್ನು ಕೇಳಿದ್ದಾರೆ. ಅದಕ್ಕೆ ಆ ಕಡೆಯಿಂದ ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿಯು ಕಾರನ್ನು 1.10 ಲಕ್ಷ ರೂ.ಗೆ ಮಾರುವುದಾಗಿ ಹೇಳಿದ್ದಾನೆ. ಕೊನೆಗೆ, 1 ಲಕ್ಷಕ್ಕೆ ಕಾರು ಕೊಡುವುದಾಗಿ ಹೇಳಿದ್ದಾನೆ. 

ಖುಷಿಯಾದ ಕೌಶಿಕ್‍ಗೆ ವಾಹನ ಕೊಳ್ಳುವುದಾದರೆ ನಿಮ್ಮ ದೃಢೀಕರಣಕ್ಕಾಗಿ ನಿಮ್ಮ ಐಡಿ ಕಳಿಸುವಂತೆ, ಫೋಟೋ, ಡಿಎಲ್‍ನ್ನು ತನ್ನ ನಂಬರ್ ಗೆ ವಾಟ್ಸಪ್ ಮಾಡಿಸಿಕೊಂಡಿದ್ದಾನೆ. ನಂತರ ಜೂ.24ರ ಬೆಳಿಗ್ಗೆ 10ಕ್ಕೆ ಪುನಃ ಕರೆ ಮಾಡಿ, ಕಾರನ್ನು ಟೆಸ್ಟ್ ಡ್ರೈವ್ ಮಾಡಲು ಲಾರಿಯಲ್ಲಿ ಕಳಿಸಲು ಟ್ರಾನ್ಸ್‍ ಪೋರ್ಟ್ ಚಾರ್ಜ್ 2 ಸಾವಿರ ಹಣ ಕಳಿಸುವಂತೆ ಹೇಳಿದ ಆರೋಪಿಗೆ ಗೂಗಲ್ ಪೇ ಮೂಲಕ ಕೌಶಿಕ್ ಹಣ ಕಳಿಸಿದ್ದಾರೆ. ನಂತರ ತಮ್ಮ ಕಾರ್ ಡ್ರೈವರ್ ಎಂಬುದಾಗಿ ಒಂದು ಮೊಬೈಲ್ ನಂಬರ್ ಕೊಟ್ಟು, ಲೊಕೇಷನ್ ಕಳಿಸುವಂತೆ ಹೇಳಿದ್ದಾನೆ. ಕೌಶಿಕ್ ತಾವಿದ್ದ ಸ್ಥಳದ ಲೊಕೇಷನ್ ಶೇರ್ ಮಾಡಿದ್ದಾರೆ. ಲೊಕೇಷನ್ ತೆಗೆದುಕೊಳ್ಳುತ್ತಿಲ್ಲ, ಅದಕ್ಕಾಗಿ ನೀವು 13,999 ರು. ಕಳಿಸಿ ಎಂಬುದಾಗಿ ವಂಚಕ ಹೇಳಿದಾಗಲೂ ಕೌಶಿಕ್ ಅಷ್ಟು ಹಣ ತನ್ನ ಅಣ್ಣನ ಗೂಗಲ್ ಪೇ ಮೂಲಕ ಕಳಿಸಿದ್ದಾರೆ ಎನ್ನಲಾಗಿದೆ. 

ಬಳಿಕ, ಕಾರಿನ ದಾಖಲೆ ನಿಮ್ಮ ಹೆಸರಿಗೆ ವರ್ಗಾವಣೆ ಮಾಡುತ್ತಿದ್ದು, 16 ಸಾವಿರ ರೂ. ವರ್ಗಾವಣೆ ಮಾಡುವಂತೆ ವಂಚಕ ಹೇಳಿದ್ದಾನೆ. ಆಗ ಕೌಶಿಕ್ ತಾನು ಕಾರನ್ನೇ ನೋಡಿಲ್ಲ, ನಿಮಗೆ ಹೇಗೆ ಹಣ ವರ್ಗಾವಣೆ ಮಾಡಲಿ ಎಂಬುದಾಗಿ ಕೇಳಿದ್ದು, ಈ ವೇಳೆ ಕರೆ ಕಟ್ ಮಾಡಿದ್ದಾರೆ. ಘಟನೆ ಬಳಿಕ ಕೌಶಿಕ್ ಸಿಇಎನ್ ಅಪರಾಧ ಠಾಣೆಯ ಮೊರೆ ಹೋಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News