ಕುಮಾರಸ್ವಾಮಿಯ ಹೇಳಿಕೆಯನ್ನು ದೊಡ್ಡದು ಮಾಡಬಾರದು: ಎಚ್.ವಿಶ್ವನಾಥ್

Update: 2019-06-26 17:39 GMT

ಮೈಸೂರು,ಜೂ.26: ಮುಖ್ಯಮಂತ್ರಿಗಳು ಹೋದಲೆಲ್ಲಾ ಮೋದಿ ಮೋದಿ ಎಂದು ಕೂಗಿದರೆ ಎಂತವರಿಗೂ ಬೇಸರವಾಗುತ್ತದೆ. ಹಾಗಾಗಿ ಮುಖ್ಯಮಂತ್ರಿಗಳು ಸ್ವಲ್ಪ ಖಾರವಾಗಿ ಮಾತನಾಡಿದ್ದಾರಷ್ಟೆ ಅದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದು ಅಡಗೂರು ಎಚ್.ವಿಶ್ವನಾಥ್ ತಿಳಿಸಿದರು.

ನಗರದಲ್ಲಿ ಮಾಧ್ಯಮದವರೊಂದಗಿ ಬುಧವಾರ ಮಾತನಾಡಿದ ಅವರು, ರಾಯಚೂರಿನ ಕರೇಗುಡ್ಡಕ್ಕೆ ತೆರಳುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಬಸ್ ಅಡ್ಡಹಾಕಿ ವೈಟಿಪಿಎಸ್ ಕಾರ್ಮಿಕರು ಮೋದಿ ಮೋದಿ ಎಂದು ಕೂಗಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹ ಒಬ್ಬ ಮನುಷ್ಯ. ಅವರು ಹೋದಲೆಲ್ಲಾ ಈ ರೀತಿ ಘೋಷಣೆ ಕೂಗಿದರೆ ಎಂತವರಿಗೂ ಬೇಸರವಾಗುತ್ತದೆ. ಹಾಗಾಗಿ ಮುಖ್ಯಮಂತ್ರಿಗಳು ಸ್ವಲ್ಪ ಘಾಸಿಯಾಗಿ ಮಾತನಾಡಿದ್ದಾರೆ. ಇದನ್ನೇ ದೊಡ್ಡದು ಮಾಡಿ ಪ್ರಚಾರ ಮಾಡಬಾರದು ಎಂದು ಹೇಳಿದರು.

ಗ್ರಾಮವಾಸ್ತವ್ಯಕ್ಕೆ ಬಿಜೆಪಿ ಗೊಂದಲ ಮಾಡುವುದು ಸರಿಯಲ್ಲ: ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯಕ್ಕೆ ಬಿಜೆಪಿಯವರು ಗೊಂದಲ ಸೃಷ್ಟಿಮಾಡುವುದು ಸರಿಯಲ್ಲ, ಗ್ರಾಮ ವಾಸ್ತವ್ಯದಿಂದ ಗ್ರಾಮಗಳ ಅಭಿವೃದ್ದಿಯಾಗುತ್ತದೆ. ಮುಖ್ಯಮಂತ್ರಿಗಳ ಈ  ಪರಿಕಲ್ಪನೆಯಿಂದ ಸಾಕಷ್ಟು ಅಭಿವೃದ್ದಿಯಾಗಲಿದೆ. ಬಿಜೆಪಿಯವರು ಗೊಂದಲ ಸೃಷ್ಟಿಸಬಾರದು ಎಂದು ಹೇಳಿದರು.

ಮುಖ್ಯಮಂತ್ರಿಗಳು ಹೊಸದಾಗಿ ಗ್ರಾಮವಾಸ್ತವ್ಯ ಮಾಡುತ್ತಿಲ್ಲ, ಈ ಹಿಂದೆಯೂ ಮಾಡಿದ್ದಾರೆ. ಇದು ಎರಡನೇ ಸುತ್ತಿನ ಗ್ರಾಮ ವಾಸ್ತವ್ಯ. ಓರ್ವ ಮುಖ್ಯಮಂತ್ರಿ ಗ್ರಾಮಗಳಿಗೆ ತೆರಳಿ ಅವರ ಕಷ್ಟಗಳನ್ನು ಕೇಳಿ ಪರಿಹರಿಸುವುದು ತಪ್ಪೇ. ಇದನ್ನು ಮೊದಲು ಬಿಜೆಪಿಯವರು ಅರ್ಥಮಾಡಿಕೊಳ್ಳಲಿ ಎಂದು ಲೇವಡಿ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News