ಕೆರೆ ತುಂಬಿಸುವ ಯೋಜನೆ 6 ತಿಂಗಳಲ್ಲಿ ಪೂರ್ಣ: ಸಚಿವ ಪುಟ್ಟರಾಜು

Update: 2019-06-26 18:01 GMT

ಮಂಡ್ಯ, ಜೂ.26: ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದುದ್ದ ಹೋಬಳಿಯ ವಿವಿಧ ಗ್ರಾಮಗಳ 54 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮುಂದಿನ 6 ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದ್ದಾರೆ. 

ಎಂ.ಹೊಸಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹಾಲು ಶಿಥಿಲೀಕರಣ ಘಟಕವನ್ನು (ಬಿಎಂಸಿ) ಬುಧವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, 182 ರೂ. ಕೋಟಿ ವೆಚ್ಚದ ಸದರಿ ಯೋಜನೆಯನ್ನು ಮೆಗಾ ಕನ್‍ಸ್ಟ್ರಕ್ಷನ್ ಕಂಪನಿಯವರು ನಿರ್ವಹಿಸುತ್ತಿದ್ದಾರೆ ಎಂದರು.

ದೇಶದ ಸದೃಢತೆಗೆ ಹೈನುಗಾರಿಕೆ ಸಹಕಾರಿಯಾಗಿದೆ. ದಿ.ಕುರಿಯನ್‍ರವರ ದೂರದೃಷ್ಟಿಯಂತೆ ದೇಶದಲ್ಲಿ ಸಚಿವ ಎಚ್.ಡಿ.ರೇವಣ್ಣ ಅವರ ಮುಂದಾಲೋಚನೆಯಿಂದ ರಾಜ್ಯದಲ್ಲಿ ಹೈನುಗಾರಿಕೆ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ಹಿನ್ನೆಲೆಯಲ್ಲಿ ಎಂ.ಹೊಸಹಳ್ಳಿ ಗ್ರಾಮದ ಹಾಲಿನ ಡೈರಿಯವರು 13 ಲಕ್ಷ ರೂ.ವೆಚ್ಚದಲ್ಲಿ ಹಾಲು ಶಿಥಲೀಕರಣ ಘಟಕ ಆರಂಭಿಸಿರುವುದು ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ದುದ್ದ ಹೋಬಳಿ ಹಾಗೂ ಜಕ್ಕನಹಳ್ಳಿಹೋಬಳಿಯ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಇರಾದೆಯಿಂದ ಸಣ್ಣ ನೀರಾವರಿ ಇಲಾಖೆಯ ಉಪವಿಭಾಗವೊಂದನ್ನು ದುದ್ದದಲ್ಲಿ ತೆರೆಯಲಾಗಿದೆ. ಜಕ್ಕನಹಳ್ಳಿ, ಬಳಘಟ್ಟ, ಏತನೀರಾವರಿ ಯೋಜನೆಗೆ 100 ಕೋಟಿ ರೂ., ಬೆಟ್ಟಹಳ್ಳಿ, ಹೊನ್ನೇನಹಳ್ಳಿ, ಪುರದಕೊಪ್ಪಲು ಗ್ರಾಮಗಳಿಗೆ ತಲಾ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ರೈತರಿಗೆ ಕಿರುಕುಳ ನೀಡುವ ವಿದ್ಯುತ್ ಇಲಾಖೆ ಅಧಿಕಾರಿಗಳನ್ನು ಸ್ಥಳದಲ್ಲೇ ಅಮಾನತು ಮಾಡಲಾಗುವುದು. ನಾನು ಶಾಸಕನಾದ ನಂತರ ಜಿ.ಮಲ್ಲಿಗೆರೆ ಗ್ರಾಮದಲ್ಲಿ ನೂತನ ಸಬ್‍ಸ್ಟೇಷನ್ ಸ್ಥಾಪಿಸಲಾಗಿದೆ. ಈಗ ಮತ್ತೊಂದು ಸಬ್‍ಸ್ಟೇಷನ್ ಆರಂಭಿಸಲು ಬಿ.ಹಟ್ನ ಗ್ರಾಮದಲ್ಲಿ ಜಮೀನು ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ ರೈತರಿಂದ ದೂರು ಬಂದ ಹಿನ್ನೆಲೆಯಲ್ಲಿ ಸೆಸ್ಕ್ ಎಇಇ ಜಯಪ್ರಕಾಶರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಮಾನವೀಯತೆಯಿಂದ ಕೆಲಸ ಮಾಡುವುದನ್ನು ಅಧಿಕಾರಿಗಳು ಅಳವಡಿಸಿಕೊಳ್ಳಬೇಕು. ದುರಸ್ಥಿಗೆ ಬಂದ ಟಿ.ಸಿ.ಗಳನ್ನು ಮೂರು ದಿವಸದಲ್ಲಿ ಬದಲಾಯಿಸಬೇಕು ಎಂದು ಸೂಚಿಸಿದರು.

ಗ್ರಾಮದ ಮುಖಂಡ ರವಿ ಭೋಜೇಗೌಡ, ಜಿಪಂ ಮಾಜಿ ಸದಸ್ಯ ಶ್ರೀಕಂಠಯ್ಯ, ತಾಪಂ ಉಪಾಧ್ಯಕ್ಷೆ ರೇಖಾ ಸುರೇಶ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಯೋಗಿತಾ, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News