ಮಂಡ್ಯ: ನೀರು ಬಿಡುಗಡೆಗಾಗಿ ಮುಂದುವರೆದ ರೈತರ ಧರಣಿ

Update: 2019-06-26 18:04 GMT

ಮಂಡ್ಯ, ಜೂ.26: ಕೆಆರ್‍ಎಸ್ ಮತ್ತು ಹೇಮಾವತಿ ಜಲಾಶಯಗಳಿಂದ ಬೆಳೆಗಳಿಗೆ ನೀರು ಬಿಡುಗಡೆಗೆ ಒತ್ತಾಯಿಸಿ ರೈತಸಂಘದ ಕಾರ್ಯಕರ್ತರು ಕೈಗೊಂಡಿರುವ ಅಹೋರಾತ್ರಿ ಧರಣಿ ಬುಧವಾರ ಐದನೇ ದಿನಕ್ಕೆ ಕಾಲಿಟ್ಟಿತು.

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ನೀರು ಬಿಡುಗಡೆಗೆ ನಿರಾಕರಿಸಿದ್ದರೂ ರೈತರು ತಮ್ಮ ಧರಣಿ ಮುಂದುವರಿಸಿದ್ದು, ರಾಜ್ಯ ಸರಕಾರ ಕೂಡಲೇ ಒಂದುಕಟ್ಟು ನೀರು ಬಿಡುಗಡೆ ಮಾಡಿ ಬೆಳೆದಿರುವ ಬೆಳೆ ರಕ್ಷಿಸುವಂತೆ ಪಟ್ಟುಹಿಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿದಂತೆ ಜಿಲ್ಲೆಯ ಯಾವ ಶಾಸಕರೂ ಧರಣಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಕೇಳದಿರುವ ಬಗ್ಗೆ ಧರಣಿ ನಿರತರು ಬ್ಯಾನರ್ ಪ್ರದರ್ಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಈ ನಡುವೆ ಮಂಗಳವಾರ ತಡರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸಲು ಮುಂದಾದ ಅಪರ ಜಿಲ್ಲಾಧಿಕಾರಿ ಯೋಗೇಶ್ ಮತ್ತು ಕೆಆರ್‍ಎಸ್ ಎಇಇ ಧರ್ಮೇಂದ್ರ ಅವರಿಗೆ ದಿಗ್ಬಂಧನ ವಿಧಿಸಿದ ರೈತರು, ಸರಕಾರದ ಮುಖ್ಯ ಕಾರ್ಯದರ್ಶಿಗಳೇ ಸ್ಪಷ್ಟನೆ ನೀಡಬೇಕೆಂದು ತಾಕೀತು ಮಾಡಿದರು.

ಬುಧವಾರ ಮುಂದುವರೆದ ಧರಣಿಗೆ ರೈತಸಂಘದ ನಾಯಕಿ ಸುನೀತಾ ಪಟ್ಟಣ್ಣಯ್ಯ, ಕೆ.ಎಸ್.ನಂಜುಂಡೇಗೌಡ ಬೆಂಬಲ ನೀಡಿದರು. ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ನಾಯಕ ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಇತರ ಮುಖಂಡರು ಧರಣಿ ನೇತೃತ್ವ ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News