ಈ ಸಾವು ನ್ಯಾಯವೇ?

Update: 2019-06-26 18:31 GMT

ಮೆಕ್ಸಿಕೊದಿಂದ ಅಮೆರಿಕಕ್ಕೆ ಹೋಗುವುದಕ್ಕಾಗಿ ರಿಯೊ ಗ್ರಾಂಡ್ ನದಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಸಾಲ್ವಡೋರ್‌ನ ಓರ್ವ ವಲಸಿಗ ಮತ್ತು ಅವರ ಎರಡು ವರ್ಷದ ಮಗಳು ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದು ಅಮೆರಿಕದಲ್ಲಿ ಆಶ್ರಯ ಕೋರಿ ಆ ದೇಶಕ್ಕೆ ಪ್ರಯಾಣಿಸುತ್ತಿರುವ ಜನರು ಎದುರಿಸುತ್ತಿರುವ ಅಪಾಯವನ್ನು ಜಗತ್ತಿನ ಮುಂದಿಟ್ಟಿದೆ. 25 ವರ್ಷದ ಆಸ್ಕರ್ ಮಾರ್ಟಿನೇಝ್ ರಮಿರೇಝ್ ತನ್ನ 21 ವರ್ಷದ ಪತ್ನಿ ಮತ್ತು ಎರಡು ವರ್ಷದ ಮಗಳೊಂದಿಗೆ ಎಲ್ ಸಾಲ್ವಡೋರ್ ತೊರೆದು ಅಮೆರಿಕಕ್ಕೆ ವಲಸೆ ಹೋಗಲು ನಿರ್ಧರಿಸಿದ್ದರು. ರವಿವಾರ ಮಧ್ಯಾಹ್ನ ನದಿಯನ್ನು ದಾಟಿ ಅಮೆರಿಕ ತಲುಪುವ ಅಪಾಯಕಾರಿ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದರು. ರಮಿರೇಝ್ ತನ್ನ ಮಗಳನ್ನು ಬೆನ್ನಿನಲ್ಲಿ ಟಿ ಶರ್ಟ್‌ನ ಒಳಗೆ ಇಟ್ಟು ನದಿ ದಾಟುತ್ತಿದ್ದರು. ಆದರೆ, ನೀರಿನ ಸುಳಿವಿಗೆ ಸಿಲುಕಿದ ಅವರು ಕೊಚ್ಚಿ ಹೋದರು. ಇದು ರಮಿರೇಝ್ ಪತ್ನಿಯ ಕಣ್ಣೆದುರೇ ಸಂಭವಿಸಿತು. ಅವರು ತೀರ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ತಂದೆ ಮತ್ತು ಮಗಳ ಮೃತದೇಹಗಳು ಸೋಮವಾರ ಪತ್ತೆಯಾದವು. ತಂದೆ ಮತ್ತು ಮಗಳು ನೀರಿನಲ್ಲಿ ತಲೆಕೆಳಗಾಗಿ ತೇಲುವ ಚಿತ್ರಗಳು ಎಲ್ ಸಾಲ್ವಡೊರ್ ಮತ್ತು ಮೆಕ್ಸಿಕೊಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿವೆ. ವಲಸಿಗರನ್ನು ನಡೆಸಿಕೊಳ್ಳುತ್ತಿರುವ ರೀತಿಗಾಗಿ ಮೆಕ್ಸಿಕೊ ಭಾರೀ ಟೀಕೆಗೆ ಗುರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor