ಪೊಲೀಸರ ಎಡವಟ್ಟು: ಮೂರು ವರ್ಷಗಳ ಬಳಿಕ ಬಂಧಮುಕ್ತಿ ಪಡೆದ 'ವಿದೇಶಿ' ಮಹಿಳೆ!

Update: 2019-06-27 03:55 GMT
ಮಧುಬಾಲಾ ಮಂಡಲ್ 

ಗುವಾಹತಿ, ಜೂ.27: "ವಿದೇಶಿ" ಹಣೆಪಟ್ಟಿ ಕಟ್ಟಿ ಮೂರು ವರ್ಷಗಳಿಂದ ಅಸ್ಸಾಂನ ಬಂಧಿತರ ಶಿಬಿರದಲ್ಲಿ ಬಂಧನದಲ್ಲಿಡಲಾಗಿದ್ದ 59 ವರ್ಷದ ಮಹಿಳೆಯೊಬ್ಬರು ಕೊನೆಗೂ ಬಂಧನದಿಂದ ಮುಕ್ತಿ ಪಡೆದಿದ್ದಾರೆ. ತಪ್ಪು ಗ್ರಹಿಕೆಯಿಂದ ಅದೇ ಹೆಸರಿನ ಬೇರೆ ಮಹಿಳೆಯ ಬದಲಾಗಿ ಇವರನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

"ಚಿರಾಂಗ್ ಜಿಲ್ಲೆಯ ಮಧುಬಾಲಾ ಮಂಡಲ್ ಎಂಬ ಮಹಿಳೆಯನ್ನು 2016ರಲ್ಲಿ ಪೊಲೀಸರು ಬಂಧಿಸಿ, ಪಕ್ಕದ ಕೊಕ್ರೆಜಾರ್‌ನಲ್ಲಿರುವ ಬಂಧಿತರ ಶಿಬಿರಕ್ಕೆ ಕಳುಹಿಸಿದ್ದರು. ಆ ಗ್ರಾಮದಲ್ಲಿ ಒಂದೇ ಹೆಸರಿನ ಇಬ್ಬರು- ಮೂವರು ಇದ್ದರು. ಒಂದೇ ಹೆಸರಿನ ಮೂವರ ಪೈಕಿ ಒಬ್ಬರು ಮೃತಪಟ್ಟಿದ್ದರೆ, ಮತ್ತೊಬ್ಬರನ್ನು ವಿದೇಶಿ ಮಹಿಳೆ ಎಂದು ಶಂಕಿಸಿ ಪ್ರಕರಣವನ್ನು ವಿದೇಶಿಯರ ನ್ಯಾಯಮಂಡಳಿಗೆ ಒಪ್ಪಿಸಲಾಗಿತ್ತು" ಎಂದು ಎಸ್ಪಿ ಸುಧಾಕರ್ ಸಿಂಗ್ ವಿವರ ನೀಡಿದ್ದಾರೆ.

ಮಧುಬಾಲಾ ನಾಮಸುದ್ರ ಅವರನ್ನು ವಿದೇಶಿ ಎಂದು ನ್ಯಾಯಮಂಡಳಿ ತೀರ್ಪು ನೀಡಿದ ಬಳಿಕ ಪೊಲೀಸರು ಅವರನ್ನು ಹುಡುಕುತ್ತಾ ಗ್ರಾಮಕ್ಕೆ ಬಂದರು. ಅವರ ಬದಲಾಗಿ ಮಧುಬಾಲಾ ದಾಸ್ ಎಂಬುವವರನ್ನು ಕರೆದೊಯ್ದರು ಎಂದು ಆಲ್ ಅಸ್ಸಾಂ ಬೆಂಗಾಲಿ ಯೂತ್ ಸ್ಟೂಡೆಂಟ್ ಫೆಡರೇಶನ್‌ನ ದೀಪಕ್ ಡೇ ಹೇಳಿದ್ದಾರೆ.

ಮಧುಬಾಲಾ ಎಂಬ 59 ವರ್ಷದ ಮಹಿಳೆಯನ್ನು ತಪ್ಪಾಗಿ ಬಂಧಿಸಲಾಗಿದೆ ಎಂಬ ದೂರು ಮೂರು ತಿಂಗಳ ಹಿಂದೆ ಬಂದಿತ್ತು. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಿದಾಗ ಮಧುಬಾಲಾ ದಾಸ್ ಅವರನ್ನು ಪೊಲೀಸರು ತಪ್ಪಾಗಿ ಗ್ರಹಿಸಿ ಬಂಧಿಸಿರುವುದು ತಿಳಿದುಬಂತು. ತಕ್ಷಣ ಕೇಂದ್ರ ಕಚೇರಿಗೆ ಮಾಹಿತಿ ನೀಡಿ, ಚಿರಾಂಗ್‌ನ ನ್ಯಾಯ ಮಂಡಳಿಗೆ ಮನವಿ ಸಲ್ಲಿಸಿ ತಪ್ಪು ಸರಿಪಡಿಸುವಂತೆ ಕೋರಲಾಗಿತ್ತು ಎಂದು ಸಿಂಗ್ ಘಟನೆಯ ವಿವರ ನೀಡಿದ್ದಾರೆ.
ರಾಜ್ಯದಲ್ಲಿ ಆರು ಬಂಧಿತ ಶಿಬಿರಗಳಲ್ಲಿ 1000 ಮಂದಿ ವಿದೇಶಿಯರು ಎಂದು ಘೋಷಿಸಲ್ಪಟ್ಟವರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News