ಮೈತ್ರಿ ಅಧಿಕಾರದಲ್ಲಿ ಸಮಸ್ಯೆಗಳು ಸಹಜ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2019-06-27 12:52 GMT

ಹುಬ್ಬಳ್ಳಿ, ಜೂ. 27: ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸುವ ವೇಳೆ ಸಮಸ್ಯೆಗಳು ಬರುವುದು ಸಹಜ. ಅವುಗಳನ್ನು ಸರಿಪಡಿಸಿಕೊಂಡು ಸರಕಾರ ಮುಂದುವರಿಯುತ್ತೇವೆ ಎಂದು ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗುರುವಾರ ಬಾದಾಮಿಗೆ ತೆರಳುವ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಸೋಲಿಗೆ ಮೈತ್ರಿ ಮಾಡಿಕೊಂಡಿದ್ದೆ ಕಾರಣ ಎಂದು ಯಾರೂ ಹೇಳಿಲ್ಲ. ನಮ್ಮ ಸೋಲಿಗೆ ಹಲವು ಕಾರಣಗಳಿವೆ ಎಂದು ಹೇಳಿದರು.

ಕೆಪಿಸಿಸಿಗೆ ನೂತನ ಪದಾಧಿಕಾರಿಗಳ ನೇಮಕ ಹಾಗೂ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಕುರಿತು ಚರ್ಚಿಸಿದ್ದು, ಬ್ಲಾಕ್ ಮತ್ತು ಬೂತ್‌ಮಟ್ಟದ ಸಮಿತಿಗಳ ನಡುವೆ ಸಂಹವನಕ್ಕೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಮಿತಿಯನ್ನು ರಚನೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ವಿವರಿಸಿದರು.

‘ಮತ ಮೋದಿಗೆ ಹಾಕ್ತೀರಿ, ಸಮಸ್ಯೆ ನಮ್ಮ ಬಳಿ ತರ್ತೀರಿ’ ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಅವರು ಯಾವ ಅರ್ಥದಲ್ಲಿ ಪ್ರತಿಕ್ರಿಯೆ ನೀಡಿದ್ದಾರೋ ತಿಳಿಯದು. ಈ ಬಗ್ಗೆ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಿರಾಕರಿಸಿದರು.

‘ಪಕ್ಷ ಸಂಘಟನೆಗೆ ಅಹಿಂದ ಸಮಾವೇಶ ಮಾಡುತ್ತೀರಾ’ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪರವಾಗಿದೆ. ನಾವು ಅಹಿಂದ ಪರ ಇದ್ದೇವೆ. ಪ್ರತ್ಯೇಕವಾಗಿ ಸಮಾವೇಶ ಮಾಡುವ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News