ಚಿಕ್ಕಮಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆಗೆ ಒತ್ತಾಯಿಸಿ ಕಟ್ಟಡ ಕಾರ್ಮಿಕರಿಂದ ಧರಣಿ
ಚಿಕ್ಕಮಗಳೂರು, ಜೂ.27: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಜೀವನ ಭದ್ರತೆಗೆ ಅಗತ್ಯವಾದ ಕಾನೂನು ಬದ್ಧ ಸೌಲಭ್ಯಗಳನ್ನು ಒದಗಿಸುವಂತೆ ಸರಕಾರವನ್ನು ಒತ್ತಾಯಿಸಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರು ಗುರುವಾರ ನಗರದಲ್ಲಿ ಧರಣಿ ನಡೆಸಿದರು.
ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರಘು ನೇತೃತ್ವದಲ್ಲಿ ನಗರದ ಆಝಾದ್ ಪಾರ್ಕ್ ವೃತ್ತದಲ್ಲಿ ಜಮಾವಣೆಗೊಂಡ ಸಂಘದ ನೂರಾರು ಕಾರ್ಯಕರ್ತರು ಕಾರ್ಮಿಕ ಕಾಯ್ದೆಯಂತೆ ಸೌಲಭ್ಯಗಳನ್ನು ಒದಗಿಸಲದ ಕಾರ್ಮಿಕ ಇಲಾಖೆ ಹಾಗೂ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಧರಣಿಯ ನೇತೃತ್ವ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ರಘು ಮಾತನಾಡಿ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಯಂತೆ ಸೌಲಭ್ಯಗಳನ್ನು ಒದಗಿಸುವುದು ಸರಕಾರದ ಕರ್ತವ್ಯವಾಗಿದ್ದರೂ ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಸರಕಾರ ಹಾಗೂ ಕಾರ್ಮಿಕ ಇಲಾಖೆ ನಿರ್ಲಕ್ಷ್ಯವಹಿಸಿದೆ. ಪರಿಣಾಮವಾಗಿ ಈ ಕಾರ್ಮಿಕರು ಜಿಲ್ಲಾದ್ಯಂತ ಯಾವುದೇ ಸೌಲಭ್ಯಗಳಿಲ್ಲದೇ ಸಂಕಷ್ಟದ ಜೀವನ ನಡೆಸುವಂತಾಗಿದೆ. ಕಾರ್ಮಿಕರು ಹಗಲು, ರಾತ್ರಿ ಬೆವರು ಸುರಿಸಿ ದುಡಿಯುತ್ತಿದ್ದರೂ ಕಾರ್ಮಿಕರ ಶ್ರಮಕ್ಕೆ ತಕ್ಕ ವೇತನ ಸಿಗುತ್ತಿಲ್ಲ ಎಂದರು.
ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ ಕೆಲಸದ ಅವಧಿಯಲ್ಲಿ ಉಂಟಾಗುವ ಅಪಘಾತ ಅವಘಡಗಳಿಗೆ ಸೂಕ್ತ ರೀತಿಯ ಪರಿಹಾರ ಸಿಗುತ್ತಿಲ್ಲ. ಕಾರ್ಮಿಕರ ಬದುಕಿನ ಭದ್ರತೆಗಾಗಿ ಅಗತ್ಯವಾದ ಪಿಂಚಣಿ, ಆರೋಗ್ಯ ವಿಮೆಯಂತಹ ಯೋಜನೆಗಳು ಜಾರಿಯಾಗಿಲ್ಲ. ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕಾರ್ಮಿಕರ ಎಲ್ಲ ರೀತಿಯ ಬೇಡಿಕೆಗಳನ್ನು ಈಡೇರಿಸಿ ದುಡಿಯುವ ವರ್ಗಗಳ ಬದುಕಿಗೆ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು.
ಧರಣಿ ಬಳಿಕ ಸಂಘದ ಮುಖಂಡರು, ಸದಸ್ಯರು ಕಾರ್ಮಿಕ ಇಲಾಖೆಯ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸಂಘದ ಮುಖಂಡರಾದ ಶಾಂತಕುಮಾರಿ, ಮಂಜುನಾಥ್, ಅಝೀಝ್, ವಸಂತ್‍ರಾಜ್, ಸುಶೀಲಮ್ಮ, ಮೋಹನ್‍ಕುಮಾರ್, ಲಕ್ಕೇಗೌಡ, ಮಂಜುಳಾ, ಲೋಕೇಶ್, ಪ್ರತಾಪ್ ಮತ್ತಿತರರು ಧರಣಿಯ ನೇತೃತ್ವವಹಿಸಿದ್ದರು.
ಕಾರ್ಮಿಕರ ಬೇಡಿಕೆಗಳು:
1. ಕೆಲಸದ ವೇಳೆ ಕಾರ್ಮಿಕರು ಅಪಘಾತಗಳಿಗೆ ತುತ್ತಾದಲ್ಲಿ ಅಪಘಾತ ಪರಿಹಾರವನ್ನು 10 ಲಕ್ಷ ರೂ.ಗೆ ಹೆಚ್ಚಿಸುವುದು.
2. ಪಿಂಚಣಿ ಮೊತ್ತವನ್ನು ಕನಿಷ್ಠ 3 ಸಾವಿರ ರೂ. ಗೆ ಹೆಚ್ಚಿಸುವುದು.
3. ಕಾರ್ಮಿಕರಿಗೆ ಇಎಸ್‍ಐ, ಭವಿಷ್ಯನಿಧಿ ಯೋಜನೆ ಜಾರಿ ಮಾಡುವುದು.
4. ಕಾರ್ಮಿಕರ ವೈದ್ಯಕೀಯ ಅರ್ಜಿಗಳ ವಿಲೇವಾರಿ ಹಿನ್ನೆಲೆಯಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿಗೆ ಪ್ರತ್ಯೇಕ ವೈದ್ಯರ ನೇಮಿಸುವುದು.
5. ಕಾರ್ಮಿಕರು ನಿಧನರಾದಾಗ ಅಂತ್ಯಕ್ರಿಯೆಗೆ 4 ಸಾವಿರ ರೂ. ಬಿಡುಗಡೆ ಮಾಡುವುದು.
6. ಕಾರ್ಮಿಕರಿಗೆ ವಸತಿ ಯೋಜನೆ ರೂಪಿಸುವುದು ಮತ್ತು ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಮೀಸಲಿಡುವುದು.
7. ಕಾರ್ಮಿಕರ ಇಬ್ಬರು ಮಕ್ಕಳಿಗೆ 1ರಿಂದ ಉನ್ನತ ವ್ಯಾಸಂಗದವರೆಗೆ ಶಿಕ್ಷಣ ವೆಚ್ಚ ಭರಿಸುವುದು ಮತ್ತು ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನವನ್ನು ಪ್ಯಾರಾ ಮೆಡಿಕಲ್, ಚಿತ್ರಕಲಾ ಹಾಗೂ ಜೆಎನ್‍ಎಂ ನರ್ಸಿಂಗ್‍ಗೂ ವಿಸ್ತರಿಸುವುದು.
8. ಕಾರ್ಮಿಕರ ವೈದ್ಯಕೀಯ ವೆಚ್ಚವನ್ನು ಕಾರ್ಮಿಕ ಮಂಡಳಿಯೇ ಭರಿಸುವುದು ಹಾಗೂ ವಲಸೆ ಕಾರ್ಮಿಕರ ಕಾಯ್ದೆ ರೂಪಿಸುವುದು.