ಸಿದ್ದಾಪುರದಲ್ಲಿ ಮತ್ತೆ ಕಾಡಾನೆ ದಾಳಿ: ಮಹಿಳೆಗೆ ಗಂಭೀರ ಗಾಯ
ಮಡಿಕೇರಿ, ಜೂ.27: ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸಿ ಮನೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿದ ಪರಿಣಾಮ ಕಾರ್ಮಿಕ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಸಿದ್ದಾಪುರ ಸಮೀಪದ ಬೀಟಿಕಾಡು ಕಾಫಿ ತೋಟದಲ್ಲಿ ನಡೆದಿದೆ.
ಬಿಬಿಟಿಸಿ ಕಂಪನಿ ತೋಟದಲ್ಲಿ ಕೆಲಸ ನಿರ್ವಹಿಸಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ಕಾಫಿ ತೋಟದಲ್ಲಿದ್ದ ಕಾಡಾನೆಯೊಂದು ಹಠಾತ್ ದಾಳಿ ಮಾಡಿದ ಪರಿಣಾಮ ಕಾರ್ಮಿಕ ಮಹಿಳೆ ಕಮಲ (55) ಎಂಬವರು ಗಂಭೀರವಾಗಿ ಗಾಯಗೊಂಡು ಅಮ್ಮತ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಒಂದು ಮರಿ ಆನೆಯೊಂದಿಗೆ ನಾಲ್ಕು ಕಾಡಾನೆಗಳ ಗುಂಪು ಬೆಳಗ್ಗಿನಿಂದ ಕಾಫಿ ತೋಟದಲ್ಲಿ ಸುತ್ತಾಡುತ್ತಿದ್ದು, ಗುಂಪಿನಲ್ಲಿದ್ದ ಒಂದು ಕಾಡಾನೆ ತೋಟದ ರಸ್ತೆಯಲ್ಲಿ ಅಡ್ಡಲಾಗಿ ಬಂದು ಮಹಿಳೆ ಮೇಲೆ ದಾಳಿ ಮಾಡಿದೆ.
ಉಪ ವಲಯಾರಣ್ಯಾಧಿಕಾರಿ ಶಿವಕುಮಾರ್ ನೇತೃತ್ವದ ಆರ್ ಆರ್‍ಟಿ ತಂಡ ಬೆಳಗಿನಿಂದ ಇತರ ಕಾಫಿ ತೋಟಗಳಲ್ಲಿ ಬೀಡುಬಿಟ್ಟ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಕೆಲವು ಆನೆಗಳ ಗುಂಪು ಬೇರ್ಪಟ್ಟು ಬೀಟಿಕಾಡು ಕಾಫಿ ತೋಟಗಳಲ್ಲಿ ಸೇರಿಕೊಂಡಿವೆ. ತೋಟದಲ್ಲಿ ಕೆಲಸ ನಿರ್ವಹಿಸುವ ಸಂದರ್ಭ ಕಾಡಾನೆ ಹಿಂಡುಗಳನ್ನು ಕಂಡು ಕಾರ್ಮಿಕರು ಭಯಭೀತರಾಗಿ ಮನೆಗೆ ಹಿಂತಿರುಗಿದ್ದಾರೆ.
ಕಾರ್ಮಿಕ ಮುಖಂಡರಾದ ಪಿ.ಆರ್.ಭರತ್ ಹಾಗೂ ಮಹದೇವ್ ಆಸ್ಪತ್ರೆಗೆ ಭೇಟಿ ನೀಡಿ ನಂತರ ಅರಣ್ಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಕಾಫಿ ತೋಟಗಳಲ್ಲಿ ಬೀಡು ಬಿಟ್ಟ ಕಾಡಾನೆಗಳ ಬಗ್ಗೆ ಕಾರ್ಮಿಕರಿಗೆ ಮಾಹಿತಿ ಇಲ್ಲದೇ ಇಂಥ ಘಟನೆ ಸಂಭವಿಸುತ್ತಿದ್ದು, ಕಾಟಾಚಾರಕ್ಕೆ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ ಎಂದು ಆರೋಪಿಸಿದರು.
ಕಾರ್ಮಿಕರು ಹಾಗೂ ರೈತರು ಜೀವ ಭಯದಲ್ಲಿ ಜೀವನ ಸಾಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಶಾಶ್ವತವಾಗಿ ಆನೆಗಳನ್ನು ಕಾಡಿಗಟ್ಟದಿದ್ದಲ್ಲಿ ಅರಣ್ಯ ಇಲಾಖೆ ಎದುರು ಕಾರ್ಮಿಕ ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸುವುದಾಗಿ ಭರತ್ ಎಚ್ಚರಿಕೆ ನೀಡಿದರು.