ದಕ್ಷಿಣ ಕೊಡಗಿನ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ: ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ
ಮಡಿಕೇರಿ,ಜೂ.27: ದಕ್ಷಿಣ ಕೊಡಗಿನ ಗ್ರಾಮಗಳಲ್ಲಿನ ವಿದ್ಯುತ್ ಸಮಸ್ಯೆಯನ್ನು 15 ದಿನಗಳಲ್ಲಿ ಸರಿಪಡಿಸದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹರಿಶ್ಚಂದ್ರಪುರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಸೆಸ್ಕ್ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ವಿದ್ಯುತ್ ಸಮಸ್ಯೆ ನೀಗಿಸಲು 15 ದಿನಗಳ ಗಡುವು ನೀಡಲಾಯಿತು. ಅದರಂತೆ 15 ದಿನಗಳಲ್ಲಿ ಸಮಸ್ಯೆ ಪರಿಹರಿಸುವುದಾಗಿ ಸೆಸ್ಕ್ ಎಇಇ ಅಂಕಯ್ಯ ಭರವಸೆ ನೀಡಿದರು.
ಸಭೆಯಲ್ಲಿ ಪೊನ್ನಂಪೇಟೆ, ಹುದಿಕೇರಿ, ಬಾಳೆಲೆ ಹಾಗೂ ಶ್ರೀಮಂಗಲ ಹೋಬಳಿಯ ರೈತರು ಪಾಲ್ಗೊಂಡು ವಿದ್ಯುತ್ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದರು. ಸಮಸ್ಯೆ ಪರಿಹಾರಕ್ಕೆ ಸೆಸ್ಕ್ ಸಿಬ್ಬಂದಿ ಹಾಗೂ ಸಾರ್ವಜನಿಕರ ನಡುವೆ ಬಾಂಧವ್ಯ ವೃದ್ಧಿಗೆ ಯೋಜನೆ ರೂಪಿಸುವಂತೆ ರೈತರು ಒತ್ತಾಯಿಸಿದರು.
ತಿತಿಮತಿಗೆ ಎಕ್ಸ್‍ಪ್ರೆಸ್ ಲೈನ್, ಟಿ. ಎಸ್ಟೇಟ್ ಒಳಗೆ ಸೆಸ್ಕ್ ಸಿಬ್ಬಂದಿ ಪ್ರವೇಶಕ್ಕೆ ಅವಕಾಶ ನೀಡುವಂತೆ ಎಸ್ಟೇಟ್ ಆಡಳಿತವನ್ನು ಒತ್ತಾಯಿಸಿ ಕ್ರಮಕೈಗೊಳ್ಳುವುದು, ವಿದ್ಯುತ್ ಮಾರ್ಗದ ಮರಗಳ ಕೊಂಬೆಗಳನ್ನು ಕಡಿಯುವುದು, ಅಪಾಯದಲ್ಲಿರುವ ವಿದ್ಯುತ್ ಮಾರ್ಗವನ್ನು ಎತ್ತರಿಸುವುದು, 15 ದಿನಗಳಿಗೊಮ್ಮೆ ಸೆಸ್ಕ್ ಹಿರಿಯ ಅಧಿಕಾರಿಗಳು, ಲೈನ್ ಮ್ಯಾನ್ ಹಾಗೂ ಇಂಜಿನಿಯರ್‍ಗಳ ಸಭೆ ನಡೆಸುವುದು, ಶ್ರೀಮಂಗಲ ಹೋಬಳಿ ವಿಸ್ತೀರ್ಣ ಅಧಿಕವಿರುವುದರಿಂದ ಹೆಚ್ಚುವರಿ ಎರಡು ಇಂಜಿನಿಯರಿಂಗ್‍ಗಳ ನೇಮಕ, ಹುದಿಕೇರಿ ಹೋಬಳಿಯಲ್ಲಿ ಹೊಸ ಸ್ಟೇಷನ್ ಸ್ಥಾಪನೆ, ನಲ್ಲೂರು ಗ್ರಾಮದಲ್ಲಿ ಟ್ರಾನ್ಸ್‍ಫಾರ್ಮರ್ ಸ್ಥಳಾಂತರಗೊಳಿಸುವುದು, ಕಾನೂರಿನಲ್ಲಿ ನಿಯಮ ಬಾಹಿರವಾಗಿ ಬಿಎಸ್‍ಎನ್‍ಎಲ್ ತಂತಿಯ ಮೇಲೆ ವಿದ್ಯುತ್ ಕಂಬ ಹಾಕಿರುವುದನ್ನು ತೆರವುಗೊಳಿಸುವುದು, ಎಲ್‍ಟಿ 4ಎ ಅಡಿಯಲ್ಲಿ ಇತರ ಜಿಲ್ಲೆಗಳಲ್ಲಿ ಇರುವಂತೆ ರೈತರಿಗೆ ಉಚಿತ ವಿದ್ಯುತ್ ಸಂಪರ್ಕ ನೀಡುವುದು ಇಲಾಖೆಯಲ್ಲಿ ವಿದ್ಯುತ್ ಕಂಬ, ವಿದ್ಯುತ್ ತಂತಿ, ಇನ್ಸುಲೇಟರ್ ಸೇರಿದಂತೆ ಇನ್ನಿತರ ಮತ್ತು ವಿದ್ಯುತ್ ನಿಲುಗಡೆ ಮಾಡುವ ಸಂದರ್ಭ ಸಾರ್ವಜನಿಕರಿಗೆ ಮೊದಲೇ ಮಾಹಿತಿ ನೀಡುವುದು, ತಿತಿಮತಿ ಶಾಲೆಯ ಸಮೀಪ ವಿದ್ಯುತ್‍ದೀಪ ಅಳವಡಿಸಲು ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದರು.
ಸೆಸ್ಕ್ ಮಡಿಕೇರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸೋಮಶೇಖರ್ ಮಾತನಾಡಿ, ವಿದ್ಯುತ್ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ದೇಶನ ನೀಡಲಾಗಿದೆ. ಇಲಾಖೆಯಲ್ಲಿ ವಿದ್ಯುತ್ ಸಾಮಾಗ್ರಿಗಳಿಗೆ ಯಾವುದೇ ಕೊರತೆ ಇಲ್ಲ. ಮಳೆಗಾಲದಲ್ಲಿ ಸಕಾಲದಲ್ಲಿ ಕರ್ತವ್ಯ ನಿರ್ವಹಿಸಲು ಪ್ರತಿ ಇಂಜಿನಿಯರ್‍ಗಳಿಗೆ ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ. ತಾತ್ಕಾಲಿಕವಾಗಿ ಹೆಚ್ಚುವರಿ ಲೈನ್‍ಮ್ಯಾನ್ ನೇಮಕ ಮಾಡಿಕೊಳ್ಳಲಾಗಿದೆ. ಕಿರಿಯ ಅಧಿಕಾರಿಗಳು ರೈತರೊಂದಿಗೆ ಉತ್ತಮ ಬಾಂಧವ್ಯ ಕಂಡುಕೊಳ್ಳಬೇಕೆಂದು ಹೇಳಿದರು.
ಗೋಣಿಕೊಪ್ಪಲು ವಿಭಾಗದ ಸೆಸ್ಕ್ ಎಇಇ ಇಂಜಿನಿಯರ್ ಅಂಕಯ್ಯ ಮಾತನಾಡಿ, ನಾಲ್ಕು ಹೋಬಳಿಗಳ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. 15 ದಿನದ ಒಳಗೆ ಕೆಲವು ಸಮಸ್ಯೆಗಳು ಪರಿಹಾರ ಕಾಣಲಿವೆ. ಉಳಿದ ಯೋಜನೆಗಳನ್ನು ಶೀಘ್ರವಾಗಿ ಬಗೆಹರಿಸಲು ಪ್ರಯತ್ನ ನಡೆಸಲಾಗುವುದು. ರೈತರು ಇಲಾಖೆಯೊಂದಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ವಿವಿಧ ಹೋಬಳಿಗಳಲ್ಲಿರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ರೈತ ಸಂಘ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಅಜ್ಜಮಾಡ ಚಂಗಪ್ಪ, ಮುಖಂಡರುಗಳಾದ ಆಲೆಮಾಡ ಮಂಜುನಾಥ್, ಮಂಡೇಪಂಡ ಪ್ರವೀಣ್, ಚೆಪ್ಪುಡಿರ ಕಾರ್ಯಪ್ಪ, ಎಸ್.ಎಸ್.ಸುರೇಶ್, ಎಂ.ಬಿ. ಅಶೋಕ್, ಇತರರು ಹಾಜರಿದ್ದರು.