×
Ad

ನಾಮಕವಾಸ್ತೆಗೆ ಸಿಎಂ ಗ್ರಾಮ ವಾಸ್ತವ್ಯದ ನಾಟಕ: ರೇಣುಕಾಚಾರ್ಯ ಟೀಕೆ

Update: 2019-06-27 20:06 IST

ಬೆಂಗಳೂರು, ಜೂ. 27: ಒಂದು ವರ್ಷ ಪಂಚತಾರಾ ಹೊಟೇಲ್‌ನಲ್ಲಿ ಮಲಗುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಇದೀಗ ನಾಮಕವಾಸ್ತೆಗೆ ಗ್ರಾಮ ವಾಸ್ತವ್ಯದ ನಾಟಕ ಆರಂಭಿಸಿದ್ದಾರೆಂದು ಮಾಜಿ ಸಚಿವ ರೇಣುಕಾಚಾರ್ಯ ಇಂದಿಲ್ಲಿ ಟೀಕಿಸಿದ್ದಾರೆ.

ಗುರುವಾರ ವಿಧಾನಸೌಧದ ಬಿಜೆಪಿ ಶಾಸಕಾಂಗಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಗ್ರಾಮ ವಾಸ್ತವ್ಯ ಮಾಡಿದ್ದ ಕುಮಾರಸ್ವಾಮಿ ಬಳಸಿದ್ದ ದಿಂಬು, ಹಾಸಿಗೆ ಎಲ್ಲವೂ ಕಾಣೆಯಾಗಿವೆ. 1 ಕೋಟಿ ರೂ.ಖರ್ಚು ಮಾಡಿ ಗ್ರಾಮ ವಾಸ್ತವ್ಯ ನಡೆಸುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.

ಸರಕಾರದ ತಾರತಮ್ಯ ನೀತಿಯಲ್ಲಿ ವಿರೋಧಿಸಿ ಪಾದಯಾತ್ರೆ ನಡೆಸುತ್ತಿದ್ದ ಶಾಸಕ ಶಿವನಗೌಡ ನಾಯಕ್ ಅವರನ್ನು ಗೂಂಡಾ ಎಂದು ಕರೆದಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ ಅವರು, ಚುನಾವಣೆ ಸೋಲಿನ ಹತಾಶೆಯಲ್ಲಿ ಮನಸೋ ಇಚ್ಛೆ ಹೇಳಿಕೆ ನೀಡುವ ನಿಮ್ಮನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕಿದೆ ಎಂದರು.

ಕೇವಲ 37 ಸ್ಥಾನ ಇಟ್ಟುಕೊಂಡು ನಿಮಗೆ ಇಷ್ಟು ಇರಬೇಕಾದರೆ, ನಾವು 105 ಜನ ಇದ್ದೇವೆ. ನಿಮ್ಮ ತುಘಲಕ್ ದರ್ಬಾರ್ ನಡೆಯುವುದಿಲ್ಲ ಎಂದ ಅವರು, ಬನ್ನಿ ಅಧಿವೇಶನಕ್ಕೆ ನಿಮ್ಮ ತಾರತಮ್ಯ ನೀತಿಯನ್ನು ಬಹಿರಂಗಪಡಿಸುತ್ತೇವೆ ಎಂದು ಇದೇ ವೇಳೆ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News