ಮೈತ್ರಿ ಸರಕಾರ ಒಂದೆರಡು ಜಿಲ್ಲೆಗೆ ಸೀಮಿತ ಎಂದ ಬಿಜೆಪಿ ಆರೋಪಕ್ಕೆ ಸಿಎಂ ಪ್ರತಿಕ್ರಿಯಿಸಿದ್ದು ಹೀಗೆ...

Update: 2019-06-27 14:44 GMT

ಬೀದರ್, ಜೂ. 27: ರಾಜ್ಯದ ಮೂವತ್ತು ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ. ಸರಕಾರ ಯಾವುದೇ ಒಂದು ಭಾಗಕ್ಕೆ ಸೀಮಿತವಾಗಿಲ್ಲ. ಮೈತ್ರಿ ಸರಕಾರ ಒಂದೆರಡು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಕೆಲವರು ಅಸೂಯೆಯಿಂದ ಆರೋಪ ಮಾಡುತ್ತಿದ್ದಾರೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಜನಸಂಪರ್ಕ ಸಭೆಯಲ್ಲಿ ಉಜಳಂಬ ಗ್ರಾಮದಲ್ಲಿ 32ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಬಜೆಟ್‌ನಲ್ಲಿ ಬೀದರ ಜಿಲ್ಲೆಯಲ್ಲಿ ವಿವಿಧ ನೀರಾವರಿ ಕಾಮಗಾರಿಗಳಿಗಾಗಿ ಸಣ್ಣ ನೀರಾವರಿ ಹಾಗೂ ಜಲಸಂಪನ್ಮೂಲ ಇಲಾಖೆಗೆ 800 ಕೋಟಿ ರೂ.ಹಂಚಿಕೆ ಮಾಡಲಾಗಿದೆ.

ಗೋದಾವರಿ ನದಿಯಿಂದ ಜಿಲ್ಲೆಗೆ 7.86 ಟಿಎಂಸಿ ನೀರು ಹಂಚಿಕೆಯಾಗಬೇಕಿದೆ ಎಂಬ ಮಾಹಿತಿ ಇದ್ದು ಈ ಕುರಿತು ನಿಖರವಾದ ಮಾಹಿತಿಯನ್ನು ನೀಡಲು ಸೂಚನೆ ನೀಡಲಾಗಿದೆ. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಘೋಷಿಸಲಾಗಿರುವ ಎಲ್ಲ ಕಾಮಗಾರಿಗಳನ್ನು ಆರಂಭಕ್ಕೆ ಮುಂದಿನ ಐದು ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದರು.

ಸಾಲಮನ್ನಾ ಯೋಜನೆಯಡಿ 2 ವರ್ಷಗಳಲ್ಲಿ ಬೀದರ್ ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕುಗಳಲ್ಲಿ 45 ಸಾವಿರ ಕೋಟಿ ರೂ.ಸಾಲಮನ್ನಾ ಮಾಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 11,785ರೈತರ ಸಾಲಮನ್ನಾ ಮಾಡಲಾಗಿದೆ. ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು.

ಬೀದರ್ ವೈದ್ಯಕೀಯ ಕಾಲೇಜು ಕಟ್ಟಡ ಕಳಪೆ ಕಾಮಗಾರಿ ಕುರಿತು ದೂರುಗಳು ಬಂದಿವೆ. ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸುಸಜ್ಜಿತಗೊಳಿಸಲು 150ರಿಂದ 200ಕೋಟಿ ರೂ.ಬಿಡುಗಡೆ ಮಾಡಲಾಗುವುದು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ.ಒದಗಿಸಲಾಗಿದೆ.
ಹೈ.ಕ. ಭಾಗದ ಎಲ್ಲ ಜಿಲ್ಲೆಗಳ ಶಾಲೆಗಳ ಸ್ಥಿತಿಗತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೂಳ್ಳಲಾಗುತ್ತಿದೆ. ಪ್ರತಿ ಶಾಲೆಯ ಸ್ಥಿತಿ, ಕಟ್ಟಡಗಳು, ಶಿಕ್ಷಕರ ಕೊರತೆ ಇತ್ಯಾದಿ ಮಾಹಿತಿಗಳನ್ನು ವಾರದೊಳಗಾಗಿ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಲಾಗಿದೆ.

ಸ್ಥಳದಲ್ಲೇ ಪರಿಹಾರ: ‘ಜನತಾ ದರ್ಶನದಲ್ಲಿ ವಿಕಲಚೇತನರ ಅಹವಾಲು ಆಲಿಸಿ, ವಿಕಲಚೇತನ ಸಹೋದರನೊಂದಿಗೆ ಆಗಮಿಸಿದ ವಿದ್ಯಾರ್ಥಿನಿಯೊಬ್ಬಳು ತನ್ನ ತಮ್ಮನ ಆರೋಗ್ಯಕ್ಕೆ ಅಗತ್ಯ ಚಿಕಿತ್ಸೆ ಕೊಡಿಸಬೇಕು. ನಾನು ಪಿಯುಸಿನಲ್ಲಿ ಶೇ.94ರಷ್ಟು ಅಂಕ ಪಡೆದು ತೇರ್ಗಡೆಯಾಗಿದ್ದು, ಕೃಷಿ ಪದವಿಯಲ್ಲಿ ಅಧ್ಯಯನ ಮಾಡಲು ಅವಕಾಶ ನೀಡಿ ಎಂದು ಕೋರಿದಳು. ಸೋದರ-ಸೋದರಿಯರ ಸಂಕಷ್ಟಕ್ಕೆ ಸ್ಪಂದಿಸಿದ ಸಿಎಂ ಬಿಎಸ್‌ಸಿ ಪದವಿ ಓದಿಸಲು ಅಗತ್ಯ ನೆರವು ನೀಡುವುದಾಗಿ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಜೊತೆಗೆ ಅವರಿಗೆ 2ಲಕ್ಷ ರೂ.ಬಿಡುಗಡೆ ಮಾಡಿದರು’

ಚಿಕಿತ್ಸೆಗೆ ಸೂಚನೆ: ‘ಕಿಡ್ನಿ ವೈಫಲ್ಯ, ಹೃದಯ ಕಾಯಿಲೆ ಇರುವವರ ಅಹವಾಲು ಆಲಿಸಿದ ಸಿಎಂ ಜಯದೇವ ಮತ್ತು ನೆಫ್ರೋ ಯುರಾಲಜಿ ಇನ್ಸ್‌ಟಿಟ್ಯೂಟ್ ನಿರ್ದೇಶಕರಿಗೆ ದೂರವಾಣಿ ಮೂಲಕ ಮಾತನಾಡಿ ಅಗತ್ಯ ಚಿಕಿತ್ಸೆ ಕೊಡಲು ಸೂಚಿಸಿದರು. ಅಲ್ಲದೆ ಆರು ಜನರಿಗೆ ಅಂಗವಿಕಲರ ಪರಿಹಾರ ನಿಧಿಯಲ್ಲಿ ಪರಿಹಾರ ಘೋಷಣೆ ಮಾಡಿದರು’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News