ಮುಖ್ಯಮಂತ್ರಿ ಕ್ಷಮೆಯಾಚನೆಗೆ ಈಶ್ವರಪ್ಪ ಒತ್ತಾಯ

Update: 2019-06-27 14:54 GMT

ಬೆಂಗಳೂರು, ಜೂ. 27: ಸಮಸ್ಯೆ ಹೇಳಿಕೊಳ್ಳಲು ಬಂದ ಜನರ ಮೇಲೆ ದರ್ಪ ತೋರಿಸುವುದು ಮುಖ್ಯಮಂತ್ರಿ ಸ್ಥಾನದ ಘನತೆಗೆ ಶೋಭೆ ತರುವುದಿಲ್ಲ. ಹೀಗಾಗಿ ಸಿಎಂ ಕುಮಾರಸ್ವಾಮಿ ಕೂಡಲೇ ರಾಜ್ಯದ ಜನತೆ ಕ್ಷಮೆ ಕೋರಬೇಕೆಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮತದಾನದ ಹಕ್ಕಿದೆ. ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಹೀಗಿದ್ದರೂ ಸಮಸ್ಯೆ ಹೇಳಲು ಬಂದ ಜನರಿಗೆ ನೀವು ಮೋದಿಗೆ ಮತ ನೀಡಿದ್ದೀರಿ ಎಂದು ಹೇಳುವುದು ಸರಿಯ್ಲ ಎಂದು ಆಕ್ಷೇಪಿಸಿದರು.

ಮುಖ್ಯಮಂತ್ರಿಯಾಗಿರುವುದಕ್ಕೆ ಜನತೆ ನಿಮ್ಮ ಬಳಿ ಬಂದಿದ್ದಾರೆ. ಇಲ್ಲವಾದರೆ ನಿಮ್ಮ ಬಳಿ ಯಾರು ಬರುತ್ತಿರಲಿಲ್ಲ. ಸಮಸ್ಯೆ ಬಗೆಹರಿಸಲು ಆಗದಿದ್ದರೆ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಆಗ್ರಹಿಸಿದ ಅವರು, ಜನರ ಸಮಸ್ಯೆ ಆಲಿಸಲು ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.

ಜನರ ಮೇಲೆ ದೌರ್ಜನ್ಯ ನಡೆಸಲು ಸಾಧ್ಯವಿಲ್ಲ. ತುರ್ತು ಪರಿಸ್ಥಿತಿ ವೇಳೆ ಇಂದಿರಾ ಗಾಂಧಿಯವರಿಗೆ ಯಾವ ಸ್ಥಿತಿ ಬಂತು ಎಂಬುದನ್ನು ಸಿಎಂ ನೆನಪಿಟ್ಟುಕೊಳ್ಳಬೇಕು ಎಂದ ಅವರು, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ ಹಾಕಿಲ್ಲವೇ ಅದನ್ನು ಮೋದಿಗೆ ಹಾಕಿದ್ದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News