ಜಿಂದಾಲ್‌ಗೆ ಕ್ರೀಡಾಂಗಣ ಬಳಕೆಗೆ ಅನುಮತಿ: ವರದಿ ನೀಡಲು ಸರಕಾರಕ್ಕೆ ಹೈಕೋರ್ಟ್ ಆದೇಶ

Update: 2019-06-27 15:55 GMT

ಬೆಂಗಳೂರು, ಜೂ.27: ಜಿಂದಾಲ್ ಸೌತ್‌ವೆಸ್ಟ್ ಬೆಂಗಳೂರು ಫುಟ್ಬಾಲ್ ಪ್ರವೈಟ್ ಲಿಮಿಟೆಡ್ ಕಂಪೆನಿಗೆ ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯಗಳನ್ನು ನಡೆಸಲು ಒಪ್ಪಿಗೆ ನೀಡಿದ ವಿಚಾರಕ್ಕೆ ಹೈಕೋರ್ಟ್ ಅಸಮಾಧಾನ ಹೊರಹಾಕಿದೆ.

ಈ ಕುರಿತು ಅಶ್ವಿನಿ ನಾಚಪ್ಪ ಸೇರಿ ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಕ್ರೀಡಾ ತರಬೇತಿದಾರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಕಂಠೀರವ ಕ್ರೀಡಾಂಗಣವು ಸರಕಾರದ ಆಸ್ತಿ, ಖಾಸಗಿ ಕಂಪೆನಿಗಳಿಗೆ ಬಳಕೆ ಮಾಡಲು ಹೇಗೆ ಅನುಮತಿ ಕೊಟ್ಟಿದ್ದೀರಿ. ಯಾವುದೇ ನಿಯಮ ಪಾಲಿಸದೆ ಹೇಗೆ ಖಾಸಗಿ ಕಂಪೆನಿಗೆ ಲೈಸನ್ಸ್ ನೀಡಿದ್ದೀರಾ ಎಂದು ರಾಜ್ಯ ಸರಕಾರಕ್ಕೆ ನ್ಯಾಯಪೀಠವು ಪ್ರಶ್ನೆ ಮಾಡಿತು.

ಈ ವೇಳೆ ಜಿಂದಾಲ್ ಕಂಪೆನಿ ಪರ ವಾದಿಸಿದ ವಕೀಲರು, ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯಾವಳಿ ಆಯೋಜನೆಗೆ ಸರಕಾರದಿಂದ ಅನುಮತಿ ಪಡೆಯಲಾಗಿದೆ. ಸಿಂಥೆಟಿಕ್ ಟ್ರಾಕ್ ಸೇರಿದಂತೆ ಕ್ರೀಡಾಂಗಣವನ್ನು ಅಂತರ್‌ರಾಷ್ಟ್ರೀಯ ಗುಣಮಟ್ಟಕ್ಕೆ ಅಭಿವೃದ್ಧಿಪಡಿಸಲು ಜಿಂದಾಲ್ ಕಂಪೆನಿ 6 ಕೋಟಿ ಖರ್ಚು ಮಾಡಿದೆ. ಫುಟ್ಬಾಲ್ ಪಂದ್ಯಾವಳಿ ವೇಳೆ ಹೊರತುಪಡಿಸಿ ಉಳಿದ ಸಮಯದಲ್ಲಿ ಯಾವುದೇ ಕ್ರೀಡಾಪಟುವಾದರೂ ಕ್ರೀಡಾಂಗಣವನ್ನು ಬಳಸಬಹುದು. ಹಾಗೇ ಕ್ರೀಡಾಂಗಣ ಬಳಕೆಗೆ ಜಿಂದಾಲ್ ಕಂಪೆನಿ ಸರಕಾರಕ್ಕೆ ಹಣ ಪಾವತಿಸುತ್ತಿದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಕ್ರೀಡಾಂಗಣ ಸರಕಾರದ ಆಸ್ತಿ. ಕಾನೂನು ಪ್ರಕ್ರಿಯೆಯನ್ನು ಪಾಲಿಸದೇ ಕ್ರೀಡಾಂಗಣವನ್ನು ಖಾಸಗಿ ಕಂಪೆನಿಗಳು ಬಳಸುವುದಕ್ಕೆ ಅನುಮತಿ ನೀಡುವುದಿಲ್ಲ. ಸರಕಾರದ ಆಸ್ತಿಯನ್ನು ಖಾಸಗಿಯವರಿಗೆ ಸ್ವಲ್ಪ ದಿನದ ಮಟ್ಟಿಗೆ ನೀಡಬೇಕು. ಅಧಿಕೃತವಾಗಿ ನೀಡಲು ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಹಲವು ತೀರ್ಪುಗಳನ್ನು ನೀಡಿದೆ. ಹೀಗಾಗಿ, ಸರಕಾರ ಇದರ ಕುರಿತು ವರದಿ ನೀಡುವಂತೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News