ಬರಪೀಡಿತ ಪ್ರದೇಶಗಳಿಗೆ, ಗೋಶಾಲೆಗಳಿಗೆ ಸಚಿವ ಶ್ರೀನಿವಾಸ್ ಭೇಟಿ

Update: 2019-06-27 17:15 GMT

ದಾವಣಗೆರೆ, ಜೂ.27: ಬರಪೀಡಿತ ಜಗಳೂರು ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ತಾಲೂಕಿನಲ್ಲಿ ಪ್ರಸ್ತುತ ಮಡ್ಡರಹಳ್ಳಿ ಮತ್ತು ಕೊಣಚಗಲ್‌ನಲ್ಲಿ ಎರಡು ಗೋಶಾಲೆಗಳನ್ನು ತೆರೆದಿದ್ದು, ಜನರ ಬೇಡಿಕೆಗನುಗುಣವಾಗಿ ಇನ್ನೂ ಎರಡು ಗೋಶಾಲೆಗಳನ್ನು ತೆರೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಭರವಸೆ ನೀಡಿದ್ದಾರೆ.

ಜಿಲ್ಲೆಯ ಜಗಳೂರು ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ಮತ್ತು ಗೋಶಾಲೆಗಳಿಗೆ ಗುರುವಾರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.

ಇಲ್ಲಿನ ಸ್ಥಳೀಯರ ಹಾಗೂ ಜಗಳೂರು ಶಾಸಕರ ಬೇಡಿಕೆಯಂತೆ ನಾಳೆಯಿಂದ ಹಿರೇಮಲ್ಲನಹೊಳೆಯಲ್ಲಿ ಗೋಶಾಲೆ ಆರಂಭಿಸಲಾಗುವುದು. ನಂತರ ಕೊಡದಗುಡ್ಡ ಅಥವಾ ಸ್ಥಳೀಯರಿಗೆ ಅನುಕೂಲಕರವಾಗುವಂತಹ ಸ್ಥಳದಲ್ಲಿ ಮತ್ತೊಂದು ಗೋಶಾಲೆ ಆರಂಭಿಸಿ ಮೇವು, ನೀರು ನೀಡಲಾಗುವುದು. ಸರಕಾರ ಮತ್ತು ಅಧಿಕಾರಿಗಳು ಮೇವನ್ನು ಒದಗಿಸುವಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮಡ್ಡರಹಳ್ಳಿಯಲ್ಲಿ ಪ್ರತಿದಿನ 3 ಸಾವಿರ ಮತ್ತು ಇಲ್ಲಿ 1,800 ರಿಂದ 2,000 ಜಾನುವಾರುಗಳಿಗೆ ಮೇವನ್ನು ಒದಗಿಸಲಾಗುತ್ತಿದೆ. ಗೋಕಟ್ಟೆಗಳಲ್ಲಿ ನೀರನ್ನು ಒದಗಿಸಲಾಗುತ್ತಿದೆ ಎಂದರು.

ಉದ್ಯೋಗ ಖಾತ್ರಿ ಯೋಜನೆಯಡಿ ಲೋಪದೋಷಗಳಾಗುತ್ತಿವೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದೆ ಕೆಲವು ಲೋಪದೋಷಗಳು ಇದ್ದವು. ಆದರೆ ಈ ಯೋಜನೆಯಡಿ ಹಂತ ಹಂತವಾಗಿ ಲೋಪದೋಷಗಳನ್ನು ಸರಿಪಡಿಸಲಾಗಿದೆ. ಕಾರ್ಮಿಕರ ವೇತನವನ್ನು ಆನ್‌ಲೈನ್ ಮೂಲಕ ಪಾವತಿಸಲಾಗುತ್ತಿದೆ. ನಿಯಮಾನುಸಾರ ಜಾಬ್ ಕಾರ್ಡ್ ವಿತರಿಸಿ ಅವರಿಂದ ಕೆಲಸ ಪಡೆದು ವೇತನ ಪಾವತಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿ ತಾಲೂಕಿನಲ್ಲಿ ಸುಮಾರು 25ರಿಂದ 30 ಸರಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 6 ಸಾವಿರ ಸರಕಾರಿ ಶಾಲೆಗಳನ್ನು ಇದುವರೆಗೆ ಮುಚ್ಚಲಾಗಿದೆ. ಇಂಗ್ಲಿಷ್ ಶಾಲೆಯಲ್ಲಿ ಓದಿದರೆ ಮಾತ್ರ ಮಕ್ಕಳು ಮುಂದೆ ಬರುತ್ತಾರೆಂಬ ಮನೋಭಾವ ಪೋಷಕರಲ್ಲಿ ನೆಲೆಯೂರಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಉಳಿಸಿಕೊಂಡು ಪ್ರಾಯೋಗಿಕವಾಗಿ ಇಂಗ್ಲಿಷ್ ಮಾಧ್ಯಮ ಆರಂಭಿಸುವ ಮೂಲಕ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ನಡೆಸಲು ಮುಖ್ಯಮಂತ್ರಿಯೊಂದಿಗೆ ಚಚಿಸರ್ಲಾಗುವುದು ಎಂದು ಹೇಳಿದರು.

ಮೊದಲಿಗೆ ಅಣಬೂರು ಅಡವಿಗೆ ಭೇಟಿ ನೀಡಿದ ಸಚಿವರು, ಅಡವಿಯ ಪ್ರಾಣಿ ಪಕ್ಷಿಗಳ ಕುಡಿಯುವ ನೀರಿಗೆಂದು ಕೊರೆಸಲಾಗಿರುವ ಬೋರ್‌ವೆಲ್ ಪರಿವೀಕ್ಷಿಸಿದರು. ಬೋರ್‌ವೆಲ್‌ನಲ್ಲಿ ಸುಮಾರು 2.5 ಇಂಚು ನೀರು ಬಿದ್ದಿದ್ದು, ಈ ನೀರನ್ನು ಪ್ರಾಣಿ ಪಕ್ಷಿಗಳು ಕುಡಿಯಲಿಕ್ಕೆ ಅನುಕೂಲವಾಗುವಂತೆ ಗೋಕಟ್ಟೆಯನ್ನು ನಿರ್ಮಿಸುವಂತೆ ಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಗಳೂರು ಶಾಸಕ ರಾಮಚಂದ್ರಪ್ಪ, ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ಜಿಪಂ ಸಿಇಒ ಎಚ್.ಬಸವರಾಜೇಂದ್ರ, ಎಸ್ಪಿಚೇತನ್ ಆರ್., ದಾವಣಗೆರೆ ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ, ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಭಾಸ್ಕರ್ ನಾಯಕ್, ಜಗಳೂರು ಇಒ ಜಾನಕಿರಾಂ, ತಹಶೀಲ್ದಾರ್ ತಿಮ್ಮಣ್ಣ, ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಹುದ್ದೆ ತುಂಬುವ ಗುರಿ ಹೊಂದಲಾಗಿದೆ. ಕಳೆದ ಬಾರಿ ಸುಮಾರು 11 ಸಾವಿರ ಹುದ್ದೆ ತುಂಬಲು ಕೆಪಿಎಸ್‌ಸಿ ಮೂಲಕ ಪರೀಕ್ಷೆ ನಡೆಸಿದಾಗ ಕೇವಲ 3,100 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಆದ್ದರಿಂದ ಈ ಬಾರಿ ಡಿಎಡ್ ಮತ್ತು ಟಿಸಿಎಚ್ ಆದವರಿಗೂ ಆದ್ಯತೆ ನೀಡಿ ನೇಮಕಾತಿಯನ್ನು ಸರಳೀಕರಣಗೊಳಿಸಿ ಈ ಭಾಗದಲ್ಲಿ ಶಿಕ್ಷಕರ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳುವ ಬಗ್ಗೆ ಚಿಂತಿಸಲಾಗಿದೆ ಹಾಗೂ ರಾಜ್ಯದ ಕಾರ್ಯದರ್ಶಿಗಳ ಜೊತೆಗೂ ಈ ಬಗ್ಗೆ ಮಾತನಾಡಲಾಗಿದೆ.
ಎಸ್.ಆರ್.ಶ್ರೀನಿವಾಸ್, ಜಿಲ್ಲಾ ಉಸ್ತುವಾರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News