×
Ad

ಮಾಂಜ್ರಾ ನದಿ ಬ್ಯಾರೇಜ್ ಗೋಡೆ ರಿಪೇರಿಯಾಗಿದೆ: ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಕೆ

Update: 2019-06-27 23:20 IST

ಬೆಂಗಳೂರು, ಜೂ.27: ಬೀದರ್ ಜಿಲ್ಲೆಯ ಔರಾದ ತಾಲೂಕಿಗೆ ಕುಡಿಯಲು ಹಾಗೂ ನೀರಾವರಿ ಉದ್ದೇಶಕ್ಕಾಗಿ ನೀರು ಒದಗಿಸಲು ಮಾಂಜ್ರಾ ನದಿಗೆ ಕಟ್ಟಲಾಗಿರುವ ನಾಲ್ಕು ಬ್ಯಾರೇಜ್‌ಗಳ ಗೋಡೆಗಳನ್ನು ಈಗಾಗಲೇ ರಿಪೇರಿ ಮಾಡಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿತು.

ಈ ಕುರಿತು ಸಾಮಾಜಿಕ ಕಾರ್ಯಕರ್ತ ಗುರುನಾಥ ವದ್ದೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಸರಕಾರದ ಪರ ವಾದಿಸಿದ ವಕೀಲರು, ಮುಂದಿನ ಮಾನ್ಸೂನ್ ವೇಳೆಗೆ ನಾಲ್ಕು ಬ್ಯಾರೇಜ್‌ಗಳಲ್ಲೂ ನೀರು ಸಂಗ್ರಹವಾಗಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿಯನ್ನು ಇತ್ಯರ್ಥಪಡಿಸಿತು.

ನೀರಾವರಿಗೆ ಮತ್ತು ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಔರಾದ್ ತಾಲೂಕಿಗೆ ನೀರು ಒದಗಿಸಲು ರಾಜ್ಯ ಸರಕಾರ ಮಾಂಜ್ರಾ ನದಿಗೆ 271 ಕೋಟಿ ರೂ.ವೆಚ್ಚದಲ್ಲಿ ನಾಲ್ಕು ಕಡೆ ಬ್ಯಾರೇಜ್‌ಗಳನ್ನು ನಿರ್ಮಿಸಿದೆ. ಈ ಬ್ಯಾರೇಜ್‌ಗಳು 2013ರಲ್ಲೇ ಉದ್ಘಾಟನೆಗೊಂಡಿದ್ದರೂ, ಈವರೆಗೆ ನೀರು ಹರಿಸಲಾಗಿಲ್ಲ. ಈ ಬಗ್ಗೆ 2019ರ ಮಾ.8ರಂದು ರಾಜ್ಯ ಸರಕಾರಕ್ಕೆ ಮನವಿ ಕೊಡಲಾಗಿದೆ. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News