ಡಿ.1ರಿಂದ ತಾಲೂಕು ಮಟ್ಟದಲ್ಲಿ ಕರ್ನಾಟಕ ಸಂಸ್ಕೃತಿ ಯೋಜನೆ ಜಾರಿ: ಡಿ.ಕೆ.ಶಿವಕುಮಾರ್
ಬೆಂಗಳೂರು, ಜೂ.27: ಗ್ರಾಮಾಂತರ ಮಟ್ಟದಲ್ಲಿಯೆ ಕಲಾವಿದರ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕರ್ನಾಟಕ ಸಂಸ್ಕೃತಿ ಯೋಜನೆಯನ್ನು ಡಿ.1ರಿಂದ ಪ್ರಾರಂಭಿಸಲಾಗುತ್ತಿದೆ. ಈ ಯೋಜನೆಗಳ ರೂಪರೇಷೆಗಳು ಹೇಗಿರಬೇಕೆಂಬುದನ್ನು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ಪ್ರತಿ ತಾಲೂಕೂ ತನ್ನದೆ ಆದ ಸಾಂಸ್ಕೃತಿಕ ಇತಿಹಾಸವನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ ವಿಶಿಷ್ಟವಾದ ಕಲಾ ಪ್ರಕಾರಗಳನ್ನು ಹೊಂದಿವೆ. ಈ ಕಲೆಗಳನ್ನು ಮುಂದುವರೆಸಿಕೊಂಡು ಬರುತ್ತಿರುವ ಕಲಾವಿದರನ್ನು ಪ್ರೋತ್ಸಾಹಿಸುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ತವ್ಯವೆಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಲಾವಿದರ ಪ್ರೋತ್ಸಾಹಕ್ಕಾಗಿಯೆ ಸಾಕಷ್ಟು ಅನುದಾನವಿದೆ. ಇದು ಕೇವಲ ಕೆಲವರ ಪಾಲಿಗಷ್ಟೆ ಸೀಮಿತವಾಗಬಾರದು. ರಾಜ್ಯದ ಪ್ರತಿ ತಾಲೂಕಿನಲ್ಲಿರುವ ಕಲಾವಿದರಿಗೂ ತಲುಪಬೇಕು. ಹೀಗಾಗಿ ಕನ್ನಡ ರಾಜ್ಯೋತ್ಸವ ದಿನದಂದು ತಾಲೂಕು ಮಟ್ಟದಲ್ಲಿ ಕಲಾಪ್ರಕಾರಗಳ ಪ್ರದರ್ಶನಗಳ ಸ್ಪರ್ಧೆ ಆಯೋಜಿಸಿ, ಅಲ್ಲಿ ವಿಜೇತರಾದ ಕಲಾವಿದರನ್ನು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದವರೆಗೆ ಹೋಗುವಂತಹ ಕಾರ್ಯಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಾಧಿಕಾರಕ್ಕೆ ವಿಶಿಷ್ಟ ಕಟ್ಟಡ: ಕಳೆದ ಸರಕಾರದ ಅವಧಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಹಾಗೂ ಪ್ರಾಧಿಕಾರ ರಚಿಸಲಾಗಿದೆ. ಬೆಂಗಳೂರಿನಲ್ಲಿ ಪ್ರತಿ ವಾರ್ಡ್ ಮಟ್ಟದಲ್ಲಿ ಹಾಗೂ ರಾಜ್ಯದಲ್ಲಿ ತಾಲೂಕು ಮಟ್ಟದಲ್ಲಿ ಕೆಂಪೇಗೌಡ ಜಯಂತಿಯನ್ನು ಆಚರಿಸಲಾಗುತ್ತಿದೆ. ಕೆಂಪೇಗೌಡರ ಚಿಂತನೆ, ಆಶಯಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಧಿಕಾರದ ವತಿಯಿಂದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ.
ಈಗ ನಾಡಪ್ರಭು ಕೆಂಪೇಗೌಡ ಪ್ರಾಧಿಕಾರಕ್ಕೆ ವಿಧಾನಸೌಧದ ಮಾದರಿಯಲ್ಲಿ ವಿಶಿಷ್ಟವಾದ ಕಟ್ಟಡವನ್ನು ನಿರ್ಮಿಸಲು ಚಿಂತನೆ ನಡೆಸಲಾಗುತ್ತಿದೆ. ಅದರ ಭಾಗವಾಗಿ ನಗರದ ರಿಂಗ್ ರಸ್ತೆಯಲ್ಲಿ ಪ್ರಾಧಿಕಾರದ ಕಟ್ಟಡ ನಿರ್ಮಾಣಕ್ಕಾಗಿ ಐದು ಎಕರೆ ಜಾಗವನ್ನು ಗೊತ್ತು ಮಾಡಲಾಗಿದೆ ಎಂದು ಅವರು ಹೇಳಿದರು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಎಲ್ಲ ಜಾತಿ, ಸಮುದಾಯಕ್ಕೆ ಸಮಾನವಾದ ಪ್ರಾಧಾನ್ಯತೆ ನೀಡಿದ ನಾಡಪ್ರಭು ಕೆಂಪೇಗೌಡರ ಆಡಳಿತ, ಅವರ ಚಿಂತನೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಂಪೇಗೌಡ ಜಯಂತಿ ಪ್ರಸ್ತುತವಾಗಿದೆ ಎಂದರು.
ಕಾರ್ಯಕ್ರಮದದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸ್ಪಟಿಕ ಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಶಾಸಕ ರೋಷನ್ ಬೇಗ್, ಮೇಯರ್ ಗಂಗಾಂಬಿಕೆ, ಬಿಬಿಎಂಪಿ ಸದಸ್ಯರು ಉಪಸ್ಥಿತರಿದ್ದರು.
ರಾಜ್ಯ ಸರಕಾರದಿಂದ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿಯಂತೆ ಕೆಂಪೇಗೌಡ ಪ್ರಶಸಿಯನ್ನು ಅನುಷ್ಠಾನಕ್ಕೆ ತರುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯನ್ನು ಮನವಿ ಮಾಡಲಾಗುವುದು. ಹಾಗೆಯೆ ಕೆಂಪೇಗೌಡ ದಿನಾಚರಣೆ ಪ್ರಯುಕ್ತ ಬಿಬಿಎಂಪಿ ಕೊಡಮಾಡುವ ಕೆಂಪೇಗೌಡ ಪ್ರಶಸ್ತಿಯನ್ನು 300, 400ಮಂದಿಗೆ ಕೊಡುವಂತಹ ಪರಿಪಾಠ ಬೇಡ. ಅರ್ಹತೆ ಮಾನದಂಡದ ಅನುಸಾರವಾಗಿ ಕೆಲವರನ್ನು ಮಾತ್ರ ಅಯ್ಕೆ ಮಾಡುವಂತಾಗಲಿ. ಇದರಿಂದ ಪ್ರಶಸ್ತಿಗೆ ಒಂದು ಘನತೆ ಬರುತ್ತದೆ.
-ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ