ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ `ಆರೋಗ್ಯ ಅರಿವು ಕಾರ್ಯಕ್ರಮ'

Update: 2019-06-27 18:21 GMT

ಕೋಲಾರ: ನಾವು ವಾಸಿಸುವ ಪರಿಸರದ ಜತೆಗೆ ವೈಯುಕ್ತಿಕ ಸ್ವಚ್ಚತೆಯಿಂದ ಆರೋಗ್ಯ ರಕ್ಷಣೆ ಸಾಧ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ರೇಣುಕಾದೇವಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಗುರುವಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಸಂಸ್ಥೆ ಹಾಗೂ ತಾಲ್ಲೂಕು ಆರೋಗ್ಯ ಇಲಾಖೆಯಿಂದ ಶಾಲಾ ಮಕ್ಕಳಿಗೆ `ಆರೋಗ್ಯ ಅರಿವು ಕಾರ್ಯಕ್ರಮ'ದ ಅಂಗವಾಗಿ ಏರ್ಪಡಿಸಿದ್ದ ರಸಪ್ರಶ್ನೆ ಸ್ವರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಹದಿಹರೆಯದ ಮಕ್ಕಳಲ್ಲಿ ವೈಯುಕ್ತಿಕ ಸ್ವಚ್ಚತೆಯ ಅರಿವು ಅಗತ್ಯವಾಗಿದೆ, ಇದರಿಂದ ಉತ್ತಮ ಆರೋಗ್ಯವೂ ಸಾಧ್ಯವಾಗುತ್ತದೆ, ಜತೆಗೆ ಕಲಿಕೆಗೂ ಹಾದಿ ಸುಗಮವಾಗುತ್ತದೆ ಎಂದರು.

ನೀವು ಬಳಸುವ ಕುಡಿಯುವ ನೀರು, ಬಳಸುವ ತಟ್ಟೆ,ಲೋಟ, ಊಟಕ್ಕೆ ಮತ್ತು ಶೌಚದ ನಂತರ ಕೈತೊಳೆಯುವ ಅಗತ್ಯತೆಯನ್ನು ವಿವರಿಸಿದ ಅವರು, ಸ್ವಚ್ಚತೆಯಿಂದ ಮಾತ್ರ ಉತ್ತಮ ಆರೋಗ್ಯ ಸಾಧ್ಯ ಎಂದರು.

ಶಾಲೆಯಲ್ಲಿ ಮಾತ್ರವಲ್ಲ ಮನೆಯಲ್ಲೂ ಊಟಕ್ಕೆ ಮುನ್ನ ಕೈತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ ಎಂದ ಅವರು, ಕೈತೊಳೆಯುವ ವಿಧಾನವನ್ನು ಮಕ್ಕಳಿಗೆ ತಿಳಿಸಿಕೊಟ್ಟರು.

ಮನೆಗಳ ಬಳಿ ಮತ್ತು ಗ್ರಾಮದ ನೀರಿನ ತಾಣಗಳ ಬಳಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು, ಇಲ್ಲವಾದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ವಿವಿಧ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಮುಖ್ಯ ಶಿಕ್ಷಕ ಸತೀಶ್ ಎಸ್.ನ್ಯಾಮತಿ, ಈಗಾಗಲೇ ಕೋಲಾರ ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಣೆಯಾಗಿದೆ, ಆದರೆ ಕೆಲವು ಕಡೆಗಳಲ್ಲಿ ಶೌಚಾಲಯವಿದ್ದರೂ, ಬಯಲು ಬಹಿರ್ದೆಸೆಗೆ ಹೋಗುವ ಅಭ್ಯಾಸವೂ ಮುಂದುವರೆದಿದ್ದು, ಅಂತಹವರಿಗೆ ಅರಿವು ಮೂಡಿಸಬೇಕು ಎಂದರು.

ಸರ್ಕಾರ ಶೌಚಾಲಯ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡಿದೆ, ಇದನ್ನು ಆರೋಗ್ಯ ಮುಕ್ತ ಬದುಕಿಗಾಗಿ ಮತ್ತು ಮನೆಯ ಮಹಿಳೆಯರು,ಹೆಣ್ಣು ಮಕ್ಕಳ ಸ್ವಾಭಿಮಾನ ರಕ್ಷಣೆಗಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿ, ಮಕ್ಕಳು ಶೌಚಾಲಯ ಬಳಸಿ ಎಂದು ಕಿವಿಮಾತು ಹೇಳಿದರು.
ಶಾಲೆಗೆ ಬಂದಾಗ ಶುಭ್ರವಾಗಿ ಸ್ನಾನ ಮಾಡಿ, ಒಗೆದ ಬಟ್ಟೆಗಳನ್ನು ಹಾಕಿಕೊಂಡು ಬರಲು ಸೂಚಿಸುವ ಉದ್ದೇಶವೇ ಸ್ವಚ್ಚತೆಗಾಗಿ ಎಂದ ಅವರು, ಉಗುರುಗಳನ್ನು ಬೆಳೆಸುವುದರಿಂದ ಅದರಲ್ಲಿ ಕೊಳಕು ಸೇರಿಕೊಂಡು ಅದು ಆಹಾರದ ಮೂಲಕ ನಮ್ಮ ದೇಹ ಸೇರುತ್ತದೆ, ವಿವಿಧ ರೋಗಗಳಿಗೆ ಕಾರಣವಾಗುತ್ತದೆ ಎಂದರು.

ರಸಪ್ರಶ್ನೆ ಸ್ವರ್ಧೆಯನ್ನು ಐದು ತಂಡಗಳಿಗೆ ನಡೆಸಿದ್ದು, ಒಂದು ತಂಡವನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಭವಾನಿ, ಸುಗುಣಾ, ಶ್ವೇತಾ,ಶ್ರೀನಿವಾಸಲು,ವೆಂಕಟರೆಡ್ಡಿ, ಫರೀದಾ, ಲೀಲಾ, ಡಿ.ಚಂದ್ರಶೇಖರ್, ವಸಂತಮ್ಮ, ನೇತ್ರಮ್ಮ ದಾಕ್ಷಾಯಿಣಿ, ಜಮುನಾ, ಸುಗುಣಾ ಬಿಎಡ್ ಕಾಲೇಜಿನ ಪ್ರಶಿಕ್ಷಾನಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News