ಡಿವೈಡರ್ ಗೆ ಕಾರು ಢಿಕ್ಕಿ: ಸ್ಥಳದಲ್ಲಿಯೇ ಏಳು ಮಂದಿ ಮೃತ್ಯು

Update: 2019-06-28 16:01 GMT

ತುಮಕೂರು, ಜೂ.28: ಪ್ರವಾಸದಿಂದ ವಾಪಸಾಗುತ್ತಿದ್ದಾಗ ಇನ್ನೋವ ಕಾರು ಪಲ್ಟಿಯಾಗಿ ಸ್ಥಳದಲ್ಲಿಯೇ 7 ಮಂದಿ ಮೃತಪಟ್ಟಿದ್ದು, ಓರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಕುಣಿಗಲ್ ತಾಲೂಕಿನ ಸಿದ್ದಾಪುರದ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.

ಮೃತರನ್ನು ತಮಿಳುನಾಡು ಮೂಲದ, ಬೆಂಗಳೂರಿನಲ್ಲಿ ಸಂಜಯನಗರ ಬಡಾವಣೆಯಲ್ಲಿ ವಾಸವಿರುವ ಸ್ವೆಲ್ವಿ, ವೀರಮ್ಮ, ಭವಾನಿ, ನಿರ್ಮಲ, ಕುಪ್ಪು, ಪಂಜಾಲಿ, ಕಾಳಿದಾಸ್ ಎಂದು ತಿಳಿದುಬಂದಿದೆ. 14 ವರ್ಷದ ಬಾಲಕ ತೀವ್ರವಾಗಿ ಗಾಯಗೊಂಡಿದ್ದು, ಕುಣಿಗಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸಲಾಗಿದೆ.

ಮೃತರು ಬೆಂಗಳೂರಿನ ಗ್ರಾರ್ಮೆಟ್ಸ್ ಒಂದರ ಉದ್ಯೋಗಿಗಳೆಂದು ಹೇಳಲಾಗುತ್ತಿದೆ. ಹಾಸನದ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಇನೋವ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಸರ್ವಿಸ್ ರಸ್ತೆಗೆ ಉರುಳಿದ್ದು, ಮೃತದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು.

ವಾಹನದಲ್ಲಿ 8 ಮಂದಿ ಇದ್ದು, 7 ಮಂದಿ ಸಾವನ್ನಪ್ಪಿದರೆ, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ರಸ್ತೆ ಅಪಘಾತದಿಂದ ಸುಮಾರು 2 ಕಿ.ಮಿ.ಗೂ ಹೆಚ್ಚು ದೂರ ವಾಹನಗಳ ದಟ್ಟಣೆ ಉಂಟಾಗಿದ್ದು, ಪೊಲೀಸರು ಪರ್ಯಾಯ ವ್ಯವಸ್ಥೆ ಮಾಡಿದ್ದು, ಜನ ಜಂಗುಳಿ ತಡೆಯಲು ಹರಸಾಹಸ ಪಟ್ಟರು.

ಮೃತರ ಬಗ್ಗೆ ಸ್ಥಳೀಯರಿಂದ ಅಸ್ಪಷ್ಟ ಮಾಹಿತಿ ಲಭ್ಯವಾಗಿದ್ದು, ನಿಖರವಾದ ಮಾಹಿತಿ ಇನ್ನಷ್ಟೇ ಲಭ್ಯವಾಗಲಿದೆ. ಈ ಸಂಬಂಧ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News