ಕೆಆರ್​ಎಸ್ ಡ್ಯಾಂಗೆ ಮುತ್ತಿಗೆ ಯತ್ನ: ರೈತ ಸಂಘದ ಕಾರ್ಯಕರ್ತರ ಬಂಧನ

Update: 2019-06-28 13:25 GMT

ಮಂಡ್ಯ, ಜೂ.28: ನಾಲೆಗಳಿಗೆ ನೀರು ಬಿಡುಗಡೆಗೆ ಒತ್ತಾಯಿಸಿ ಶುಕ್ರವಾರ ಕೆಆರ್​ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತಸಂಘದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ನೀರು ಬಿಡುಗಡೆಗೆ ಒತ್ತಾಯಿಸಿ ಒಂದು ವಾರದಿಂದ ಮಂಡ್ಯದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ರೈತರು, ಶುಕ್ರವಾರ ಬೆಳಗ್ಗೆ 11 ಗಂಟೆಯೊಳಗೆ ನೀರು ಬಿಡದಿದ್ದರೆ ಜಲಾಶಯಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದರು. ಅದರಂತೆ ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಧರಣಿ ನಡೆಸಿದ ಅವರು, ಸರಕಾರದಿಂದ ಯಾವುದೇ ಮಾಹಿತಿ ಬಾರದ ಹಿನ್ನೆಲೆಯಲ್ಲಿ ತೆರೆದ ವಾಹನ ಮತ್ತು ಬೈಕ್ ರ‍್ಯಾಲಿ ಮೂಲಕ ಕೆಆರ್​ಎಸ್ಗೆ ತೆರಳಿದರು.

ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮತ್ತು ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಹೊರಟ ಸಂಘದ ಕಾರ್ಯಕರ್ತರು, ಮಾರ್ಗದುದ್ದಕ್ಕೂ ಸರಕಾರ, ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು. ರೈತರ ಎಚ್ಚರಿಕೆ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಜಲಾಶಯ ತಲುಪಿದ ರೈತರು ಧರಣಿ ನಡೆಸಿ ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಬಡಗಲಪುರ ನಾಗೇಂದ್ರ, ತನ್ನ ಪುತ್ರನ ಸೋಲಿಸಿದ ಕಾರಣಕ್ಕೆ ಸಿಎಂ ಕುಮಾರಸ್ವಾಮಿ ಬೆಳೆಗಳಿಗೆ ನೀರು ಹರಿಸದೆ ಮಂಡ್ಯ ರೈತರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆಂದು ಆರೋಪಿಸಿದರು.

ವಿಧಾನಸೌಧ ಕುಮಾರಸ್ವಾಮಿ ಕುಟುಂಬದ ಸೊತ್ತಲ್ಲ. ವಿಧಾನಸೌಧದಲ್ಲಿ ಕೂರಲು ಅವರಿಗೆ ಯೋಗ್ಯತೆ ಇಲ್ಲ. ರೈತರಿಗೆ ಅನುಕೂಲ ಮಾಡಿಕೊಡಲು ಆಗದಿದ್ದರೆ ರಾಜೀನಾಮೆ ಕೊಡಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಜಲಾಶಯದಲ್ಲಿ ಕುಡಿಯಲು ಮಿಕ್ಕಿ ಒಂದು ಕಟ್ಟು ಬೆಳೆಗಳಿಗೆ ನೀರು ಹರಿಸಬಹುದು. ಇದನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನದಟ್ಟು ಮಾಡದೆ ರಾಜ್ಯ ಸರಕಾರ ಹೊಣೆಗಾರಿಕೆಯಿಂದ ನುಣಚಿಕೊಂಡಿದೆ ಎಂದು ಅವರು ದೂರಿದರು.

ಬರಗಾಲ, ಸಾಲದ ಹೊರೆಯಿಂದ ಈಗಾಗಲೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಮಂಡ್ಯದ ರೈತರೇ ಹೆಚ್ಚು. ಈಗ ಬೆಳೆದಿರುವ ಕಬ್ಬು ಕೈಗೆ ಸಿಗದಿದ್ದರೆ ಮತ್ತಷ್ಟು ಮಂದಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ಇದಕ್ಕೆ ಸರಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಅವರು ಕಿಡಿಕಾರಿದರು.

ಈ ವೇಳೆಗೆ ಪ್ರತಿಭಟನಾಕಾರರ ಬಳಿ ಆಗಮಿಸಿದ ಜಲಾಶಯದ ಸಹಾಯಕ ಅಭಿಯಂತರ ರಾಮಕೃಷ್ಣ ಅವರು, ಜಲಾಶಯದಲ್ಲಿ ನೀರಿನ ಕೊರತೆ ಹಿನ್ನೆಲೆಯಲ್ಲಿ ನಾಲೆಗಳಿಗೆ ನೀರು ಬಿಡಲು ಸಾಧ್ಯವಿಲ್ಲವೆಂಬ ಸರಕಾರದ ಆದೇಶವನ್ನು ತಿಳಿಸಿದರು. ಇದರಿಂದ ಮತ್ತಷ್ಟು ಕೆರಳಿದ ರೈತರು ಮುಖ್ಯಮಂತ್ರಿ, ಸಂಬಂಧಿಸಿದ ಸಚಿವರು, ಜಿಲ್ಲಾ ಸಚಿವರು, ಶಾಸಕರು ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಜಲಾಶಯಕ್ಕೆ ಮುತ್ತಿಗೆ ಹಾಕಲು ಮುಂದಾದರು. ತಕ್ಷಣ ಪೊಲೀಸರು ಬಂಧಿಸಿ ಕರೆದೊಯ್ದರು.

ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಕೆಆರ್​ಎಸ್ನ ಬೃಂದಾವನಕ್ಕೆ ಪ್ರವಾಸಿಗರ ಪ್ರವೇಶ ನಿಷೇಧ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News