ಐಎಂಎ ಬಹುಕೋಟಿ ವಂಚನೆ ಪ್ರಕರಣ: ಸಚಿವ ಝಮೀರ್ ಅಹ್ಮದ್ ಗೆ ಈ.ಡಿ ಸಮನ್ಸ್

Update: 2019-06-28 13:53 GMT

ಬೆಂಗಳೂರು, ಜೂ.28: ಐಎಂಎ ವಂಚನೆ ಪ್ರಕರಣ ಸಂಬಂಧ ಆಹಾರ ಮತ್ತು ನಾಗರಿಕ ಸಚಿವ ಝಮೀರ್ ಅಹ್ಮದ್ ಖಾನ್ ಅವರಿಗೆ ಜಾರಿ ನಿರ್ದೇಶನಾಲಯ (ಈ.ಡಿ) ಸಮನ್ಸ್ ನೀಡಿದೆ.

ಜಾರಿ ನಿರ್ದೇಶನಾಲಯದ ಮೂವರು ಅಧಿಕಾರಿಗಳ ತಂಡ ಶುಕ್ರವಾರ ಇಲ್ಲಿನ ರಾಜಮಹಲ್ ರಸ್ತೆಯಲ್ಲಿರುವ ಝಮೀರ್ ಅಹ್ಮದ್ ಅವರ ನಿವಾಸಕ್ಕೆ ತೆರಳಿ ಸಮನ್ಸ್ ನೀಡಿದ್ದು, ಜುಲೈ 5ರೊಳಗೆ ಉತ್ತರಿಸುವಂತೆ ಸೂಚಿಸಿರುವುದಾಗಿ ತಿಳಿದುಬಂದಿದೆ.

ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ಅವರಿಗೆ ಸಚಿವ ಝಮೀರ್ ಆಸ್ತಿ ಮಾರಾಟ ಮಾಡಿದ್ದರು. ಈ ಆಸ್ತಿ ಕುರಿತು ವಿವರಣೆ ಹಾಗೂ ಮನ್ಸೂರ್ ಬಗೆಗಿನ ಮಾಹಿತಿ ಕೇಳಿ ಈ.ಡಿ ಸಮನ್ಸ್ ನೀಡಿದೆ ಎನ್ನಲಾಗಿದೆ.

ಸಚಿವ ಝಮೀರ್ ಖಾನ್‌ಗೆ ಸಮನ್ಸ್ ಜಾರಿ ಹಿನ್ನೆಲೆಯಲ್ಲಿ ಈ.ಡಿ ಕಚೇರಿಯಲ್ಲಿ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಸಭೆ ನಡೆದಿದ್ದು, ಐಎಂಎ ವಂಚನೆ ಕುರಿತು ಇಲ್ಲಿಯವರೆಗಿನ ತನಿಖಾ ವರದಿ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ.

ಕಾದು ನಿಂತ ಅಧಿಕಾರಿಗಳು

ಶುಕ್ರವಾರ ನಗರದ ರಾಜ್‌ಮಹಲ್ ರಸ್ತೆಯಲ್ಲಿರುವ ಸಚಿವ ಝಮೀರ್ ಅಹ್ಮದ್ ಖಾನ್ ಅವರ ನಿವಾಸಕ್ಕೆ ಸಮನ್ಸ್ ಪ್ರತಿ ನೀಡಲು ಈ.ಡಿ. ಅಧಿಕಾರಿಗಳು ತೆರಳಿದ್ದರು. ಸಚಿವರ ಕುಟುಂಬಸ್ಥರು ಮನೆ ಬಾಗಿಲು ತೆರೆಯದ ಕಾರಣ, ಈ.ಡಿ ಅಧಿಕಾರಿಗಳು ಕೆಲ ಹೊತ್ತು ಮನೆ ಹೊರಗಡೆ ಕಾದು ನಿಂತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News