ಜುಲೈ12 ರಿಂದ ವಿಧಾನ ಮಂಡಲ ಅಧಿವೇಶನ

Update: 2019-06-28 14:47 GMT

ಬೆಂಗಳೂರು, ಜೂ. 28: ಜುಲೈ 12ರಿಂದ 26ರ ವರೆಗೆ ವಿಧಾನ ಮಂಡಲ ಅಧಿವೇಶನ ನಡೆಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಶುಕ್ರವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿ ಸಚಿವ ಸಂಪುಟ ಸಭಾ ಮಂದಿರದಲ್ಲಿ ಸಿಎಂ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಬೆಳೆ ಸಮೀಕ್ಷೆ: ದೇಶದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಯಾವ ಭಾಗದಲ್ಲಿ ಯಾವ ಬೆಳೆ ಬೆಳೆಯುತ್ತಿದ್ದಾರೆ ಎನ್ನುವ ಮಾಹಿತಿ ಸಂಗ್ರಹಿಸಲು ‘ಕರ್ನಾಟಕ ರೈತ ಸುರಕ್ಷಾ ಬೆಳೆ ಸಮೀಕ್ಷೆ’ಗೆ ಮೊಬೈಲ್ ಆ್ಯಪ್ ಮೂಲಕ ಬೆಳೆ ಮಾಹಿತಿ ಸಂಗ್ರಹಿಸಲು ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ ಎಂದು ಕೃಷ್ಣಭೈರೇಗೌಡ ತಿಳಿಸಿದರು.

ಬರ, ಅತಿವೃಷ್ಟಿ ಸಂಭವಿಸಿದ ವೇಳೆ ಪರಿಹಾರಕ್ಕೆ ಮನವಿ ಸಲ್ಲಿಸಲು ವ್ಯತ್ಯಾಸ ಆಗುತ್ತಿತ್ತು. ಆದುದರಿಂದ ನಿಖರವಾದ ಬೆಳೆ ಮಾಹಿತಿ ಪಡೆಯಲು ಮೊಬೈಲ್ ಆ್ಯಪ್‌ನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರ ಮೂಲಕ ರಾಜ್ಯದಲ್ಲಿನ 2.20ಲಕ್ಷ ಪ್ಲಾಟ್‌ಗಳಲ್ಲಿ ಯಾವ ಬೆಳೆ ಇದೆ ಎನ್ನುವ ಮಾಹಿತಿ ಪಡೆಯಬಹುದು.

ಈ ಉದ್ದೇಶಕ್ಕೆ ಎಸೆಸೆಲ್ಸಿ ಉತ್ತೀರ್ಣರಾದ ಯುವಕ-ಯುವತಿಯರನ್ನು ಬಳಸಿಕೊಳ್ಳಲಾಗುವುದು. ಅವರಿಗೆ 1 ಸಮೀಕ್ಷೆಗೆ 10ರೂ.ನೀಡಲಾಗುವುದು. ಪ್ರತಿನಿತ್ಯ 50 ಸಮೀಕ್ಷೆ ಮಾಡಲು ಸೂಚನೆ ನೀಡಲಾಗಿದೆ. ಇದಕ್ಕಾಗಿ 90 ಕೋಟಿ ರೂ.ವೆಚ್ಚ ತಗಲಬಹುದು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.

ಫಸಲ್ ಬಿಮಾ ಯೋಜನೆಯಡಿ ರೈತರ ವಿಮಾ ಕಂತು ಪಾವತಿಸಲು ಇಂದಿನ ಸಂಪುಟ ಸಭೆ ನಿರ್ಧರಿಸಿದೆ. ಬೆಳೆಗಳಿಗೆ ಶೇ.1.5ರಷ್ಟು ಮತ್ತು ಕೆಲ ಬೆಳೆಗಳಿಗೆ ಶೇ.2ರಷ್ಟು ರೈತರು ತಮ್ಮ ಪಾಲಿನ ಕಂತನ್ನು ಪಾವತಿಸಬೇಕು. ಉಳಿದ ಪ್ರೀಮಿಯಂ ಮೊತ್ತವನ್ನು ರಾಜ್ಯ-ಶೇ.50 ಮತ್ತು ಕೇಂದ್ರ-ಶೇ.50ರಷ್ಟು ಪಾವತಿಸುತ್ತದೆ. ಅದರಂತೆ 2019-20ನೆ ಸಾಲಿನ ಪ್ರೀಮಿಯಂ ಪಾವತಿಗಾಗಿ 546 ಕೋಟಿ ರೂ.ಪಾವತಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದರು.

ಮೈಸೂರಿನಲ್ಲಿ ನರ್ಮ್ ಯೋಜನೆಯಡಿ ದಿನದ 24 ಗಂಟೆ ಕುಡಿಯುವ ನೀರು ಪೂರೈಸುವ ಪರಿಷ್ಕೃತ ಯೋಜನೆಗೆ ಹೆಚ್ಚುವರಿಯಾಗಿ (229 ಕೋಟಿ ರೂ.) 50.76 ಕೋಟಿ ರೂ. ಒದಗಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಹೇಮಾವತಿ ಬಲದಂಡೆ ನಾಲೆ ಶಿಥಿಲವಾಗಿರುವುದರಿಂದ 92 ಕಿ.ಮೀ ನಾಲೆ ಆಧುನೀಕರಣ ಕಾಮಗಾರಿಗೆ 422 ಕೋಟಿ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪಾವಗಡದಲ್ಲಿ 60 ಹಾಸಿಗೆಗಳ ಹೆರಿಗೆ ಆಸ್ಪತ್ರೆಗಳ ನಿರ್ಮಾಣ, ರಾಯಚೂರು ಆಸ್ಪತ್ರೆಗೆ ಹೆಚ್ಚುವರಿ ಸೌಲಭ್ಯ ಕಲ್ಪಿಸುವುದು, ದಾವಣಗೆರೆಯಲ್ಲಿ 100 ಹಾಸಿಗೆಗಳ ಹೆರಿಗೆ ಆಸ್ಪತ್ರೆ ಹಾಗೂ ಬಳ್ಳಾರಿಯಲ್ಲಿ 100 ಹಾಸಿಗೆಗಳ ಹೆರಿಗೆ ಆಸ್ಪತ್ರೆ ನಿರ್ಮಿಸುವ ಕಾಮಗಾರಿಗಳಿಗೆ ಒಟ್ಟಾರೆ 71.80 ಕೋಟಿ ರೂ.ಗಳನ್ನು ಒದಗಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದರು.

2020-21ನೆ ಸಾಲಿನಲ್ಲಿ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲಿ ಹೆಚ್ಚುವರಿಯಾಗಿ ಡಿಎನ್‌ಬಿ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಹೊಸದಾಗಿ ಸಾತ್ನಕೋತ್ತರ ವೈದ್ಯಕೀಯ ಪದವಿಗೆ 72 ಹೆಚ್ಚುವರಿ ಸೀಟುಗಳನ್ನು ಸೃಜಿಸಲಾಗಿದೆ. ಇದರಿಂದ ರಾಜ್ಯದ 10 ಆಸ್ಪತ್ರೆಗಳಲ್ಲಿ ಸಾತ್ನಕೋತ್ತರ ಪದವಿ ಮಾಡಲು ಅವಕಾಶ ಕಲ್ಪಿಸಿದೆ. ಹೊಳೇನರಸಿಪುರ, ದೊಡ್ಡಬಳ್ಳಾಪುರ, ಗಂಗಾವತಿ, ಶಿರಾ, ಬಸವಕಲ್ಯಾಣ, ಹಾವೇರಿ, ಚಿಕ್ಕಬಳ್ಳಾಪುರ, ಯಾದಗಿರಿ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ವೆನ್ಲಾಕ್ ಆಸ್ಪತ್ರೆಗಳಲ್ಲಿ ಇದನ್ನು ಆರಂಭಿಸಲಾಗುತ್ತಿದೆ. ನೀಟ್ ಪರೀಕ್ಷೆ ಮೂಲಕ ಇದಕ್ಕೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ 30 ಸಾವಿರ ರೂ.ನಿಂದ 40 ಸಾವಿರ ರೂ. ಸ್ಟೈಪಂಡ್ ನೀಡಲಾಗುತ್ತದೆ. ಇದರಿಂದ ಸಾತ್ನಕೋತ್ತರ ವೈದ್ಯಕೀಯ ಸೀಟುಗಳು ಹೆಚ್ಚಳವಾಗವುದರ ಜೊತೆಗೆ ನಮ್ಮ ಆಸ್ಪತ್ರೆಗಳಿಗೆ ತಜ್ಞವೈದ್ಯರ ಸೇವೆ ದೊರೆಯಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News