ವಾಹನ ಸವಾರರೇ ಎಚ್ಚರ...ಸಂಚಾರ ನಿಯಮ ಉಲ್ಲಂಘಿಸಿದರೆ ಕಟ್ಟಬೇಕು ಭಾರೀ ದಂಡ
ಬೆಂಗಳೂರು, ಜೂ.28: ಮುಂದಿನ ದಿನಗಳಲ್ಲಿ ವಾಹನ ಚಲಾಯಿಸುವವರು ಎಚ್ಚರಿಕೆಯಿಂದ ಚಲಾವಣೆ ಮಾಡಬೇಕಿದೆ. ಏಕೆಂದರೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಅಧಿಕ ದಂಡವನ್ನು ಕಟ್ಟಬೇಕಾಗುತ್ತದೆ. ಕೇಂದ್ರ ಸರಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ದಂಡದ ಮೊತ್ತವನ್ನು ಹೆಚ್ಚಿಸಿ ನಿಯಮ ಜಾರಿಗೆ ತಂದಿದೆ. ಇದೀಗ ರಾಜ್ಯ ಸಾರಿಗೆ ಇಲಾಖೆ ಗೆಜೆಟೆಡ್ ಹೊರಡಿಸಿ ದಂಡದ ನಿಯಮಗಳನ್ನು ಜಾರಿ ಮಾಡಿದೆ.
ಈ ಹಿನ್ನೆಲೆಯಲ್ಲಿ ಅಡ್ಡಾದಿಡ್ಡಿ ವಾಹನಗಳ ಚಾಲನೆ, ಮೊಬೈಲ್ ಬಳಕೆ, ಚಾಲನಾ ಪತ್ರ(ಡಿಎಲ್)ವಿಲ್ಲದೆ ವಾಹನ ಚಾಲನೆ ಹಾಗೂ ನಿಯಮ ಉಲ್ಲಂಘಿಸಿದರೆ ಹಿಂದಿನ ದಂಡದ ಮೊತ್ತಕ್ಕಿಂತ ಶೇ.10 ರಷ್ಟು ಅಧಿಕ ದಂಡ ಕಟ್ಟಬೇಕಾಗುತ್ತದೆ. ಈ ಮೂಲಕ ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡಿಸುವ ಮೂಲಕ ಕಟ್ಟುನಿಟ್ಟಿನ ಸಂಚಾರ ನಿಯಮ ಜಾರಿಗೆ ತರಲು ಸರಕಾರ ಮುಂದಾಗಿದೆ.
ರಸ್ತೆ ಅಪಘಾತ ಮತ್ತು ಸಂಚಾರ ದಟ್ಟಣೆಯನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಒಟ್ಟಾರೆ, ವಾಹನಗಳ ದಾಖಲೆ ಪತ್ರಗಳು ಹಾಗೂ ನಿಯಮ ಉಲ್ಲಂಘನೆ ಮಾಡಿದರೆ ಹೆಚ್ಚುವರಿ ದಂಡ ತಪ್ಪಿದ್ದಲ್ಲ.
ಯಾವುದಕ್ಕೆ ಎಷ್ಟು ದಂಡ:
ಅತಿ ವೇಗ ಚಾಲನೆ: 500 ರಿಂದ ಒಂದು ಸಾವಿರ
ಮೊಬೈಲ್ ಬಳಕೆ: 1ನೆ ಬಾರಿ ಒಂದು ಸಾವಿರ, 2 ನೆ ಬಾರಿ ಎರಡು ಸಾವಿರ
ವಿಮಾ ರಹಿತ ವಾಹನ: ಒಂದು ಸಾವಿರ
ನೋಂದಣಿಯಾಗದ ವಾಹನ ಚಾಲನೆ: 1 ನೆ ಬಾರಿ 5 ಸಾವಿರ, 2 ನೆ ಬಾರಿ 10 ಸಾವಿರ
ಫಿಟ್‌ನೆಸ್ ಸರ್ಟಿಫಿಕೇಟ್ ಇಲ್ಲದೆ ಚಾಲನೆ: 1 ನೆ ಬಾರಿ 2 ಸಾವಿರ, 2 ನೆ ಬಾರಿ 5 ಸಾವಿರ
ನೋಪಾರ್ಕಿಂಗ್: 1 ಸಾವಿರ