ಐಎಂಎ ಪ್ರಕರಣ: ಸಿಬಿಐಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಭಾಗೀಯ ಪೀಠಕ್ಕೆ ವರ್ಗ
ಬೆಂಗಳೂರು, ಜೂ.28: ಐಎಂಎ(ಐ ಮಾನಿಟರಿ ಅಡ್ವೈಸರಿ) ಕಂಪೆನಿ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಕೋರಿ ಸಲ್ಲಿಸಿದ್ದ ರಿಟ್ ಅರ್ಜಿ ಸಂಬಂಧ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಪ್ರಕರಣವನ್ನು ವಿಭಾಗೀಯ ಪೀಠಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿದೆ.
ಚಿತ್ರದುರ್ಗ ನಗರದ ಮುಹಮ್ಮದ್ ಸಿರಾಜುದ್ದೀನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಐಎಂಎ ಕಂಪೆನಿಯ ವಂಚನೆ ಪ್ರಕರಣದ ತನಿಖಾ ಪ್ರಗತಿ ವರದಿಯನ್ನು ಎಸ್‌ಐಟಿ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು. ಈ ವರದಿಯನ್ನು ಸ್ವೀಕರಿಸಿ ಪ್ರತಿಕ್ರಿಯಿಸಿದ ನ್ಯಾಯಪೀಠವು ಐಎಂಎ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಹಲವು ರಿಟ್ ಅರ್ಜಿಗಳು ಸಲ್ಲಿಕೆಯಾಗಿವೆ. ಅಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ, ಈ ಪ್ರಕರಣವನ್ನೂ ಅಲ್ಲಿಗೆ ವರ್ಗಾಯಿಸಲಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿ ಆದೇಶ ಹೊರಡಿಸಿತು.
ಐಎಂಎ ಸಂಸ್ಥೆಯಲ್ಲಿ 10 ಲಕ್ಷ ಹೂಡಿಕೆ ಮಾಡಿದ್ದೇನೆ. ಸಂಸ್ಥೆ ಮುಖ್ಯಸ್ಥ ಮನ್ಸೂರ್ ಅವರು, ಹಾಲಿ, ಮಾಜಿ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಾಕಷ್ಟು ಆಪ್ತರಿದ್ದಾರೆ. ತುಂಬಾ ಪ್ರಭಾವಿ ಆಗಿರುವುದರಿಂದ ರಾಜ್ಯ ಪೊಲೀಸರಿಂದ ಪಾರದರ್ಶಕ ತನಿಖೆ ಸಾಧ್ಯವಿಲ್ಲ. ಅವರು ತಲೆ ಮರೆಸಿಕೊಂಡು ಹಲವು ವಾರಗಳೆ ಕಳೆದಿದ್ದರೂ ಪೊಲೀಸರು ಪತ್ತೆ ಮಾಡಿಲ್ಲ ಎಂದು ಸಿರಾಜುದ್ದೀನ್ ಅರ್ಜಿಯಲ್ಲಿ ಆರೋಪಿಸಿದ್ದರು.