ಮೈಸೂರು ಮನಪಾ ವತಿಯಿಂದ 'ಯೋಗಲಕ್ಷ್ಮಿ' ಯೋಜನೆ ಜಾರಿ: ಮೇಯರ್ ಪುಷ್ಪಲತಾ ಜಗನ್ನಾಥ್
ಮೈಸೂರು,ಜೂ.28: ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣುಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಪಾಲಿಕೆ ವ್ಯಾಪ್ತಿಯಲ್ಲಿ 2019-20ನೇ ಸಾಲಿನಿಂದ ಹೊಸದಾಗಿ “ಯೋಗಲಕ್ಷ್ಮಿ” ಯೋಜನೆಯನ್ನು ಜಾರಿಗೆ ತಂದಿದ್ದು, ಅದರಂತೆ ಮಗು 18 ವರ್ಷ ತುಂಬುವವರೆಗೆ 25,000 ರೂ.ಗಳನ್ನು ಬ್ಯಾಂಕಿನಲ್ಲಿಟ್ಟು ಬಾಂಡ್ ವಿತರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ವೆಚ್ಚವನ್ನು 2019-20ನೇ ಸಾಲಿನ ಆಯವ್ಯಯದ ಸಾಮಾನ್ಯ ನಿಧಿಯಿಂದ ಮೀಸಲಿಡಲಾಗಿದ್ದು, ಎ.1 ರ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣುಮಕ್ಕಳು ಈ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದರು. ಫಲಾನುಭವಿಗಳು ಅರ್ಜಿ ನಮೂನೆಯನ್ನು ಸಂಬಂಧಿಸಿದ ವಲಯ ಕಚೇರಿಯಿಂದ ಮುಖ್ಯ ಕಛೇರಿಯ ಜನನ ಮರಣ ವಿಭಾಗದಿಂದ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಎ.1 ರ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣುಮಕ್ಕಳು ಈ ಯೋಜನೆಯಡಿ ಸೌಲಭ್ಯ ಪಡೆಯಬಹುದು. ಮಗು ಜನಿಸಿದ 90 ದಿನದೊಳಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಪೋಷಕರೊಂದಿಗೆ ಇರುವ ಮಗುವಿನ ಭಾವಚಿತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಯೋಜನೆಯ ಸೌಲಭ್ಯಗಳನ್ನು ಬಡತನ ರೇಖೆಗಿಂತ ಕೆಳಗಿರುವ ವಾರ್ಷಿಕ ಆದಾಯ 2.50 ಲಕ್ಷರೂ.ಹೊಂದಿರುವ ಕುಟುಂಬದ ಒಂದು ಹೆಣ್ಣು ಮಗುವಿಗೆ ಮಾತ್ರ ಸೀಮಿತ. ಫಲಾನುಭವಿಯ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗು ಸೇರಿ ಮಕ್ಕಳ ಸಂಖ್ಯೆ 2 ಕ್ಕಿಂತ ಹೆಚ್ಚಿರಬಾರದು. ತಾಯಿ ಕಾರ್ಡ್ ಹೊಂದಿರಬೇಕು. ವಯಸ್ಸಿಗನುಗುಣವಾಗಿ ಎಲ್ಲಾ ಚುಚ್ಚುಮದ್ದನ್ನು ಹಾಕಿಸಿರಬೇಕು. ಮೈಸೂರು ನಗರ ನಿವಾಸಿಯಾಗಿರಬೇಕು. ಕಳೆದ ಐದು ವರ್ಷಗಳಿಂದ ಮೈಸೂರು ನಗರದಲ್ಲಿ ವಾಸವಿರಬೇಕು. ಕೇಂದ್ರ, ರಾಜ್ಯ, ಅರೆ ಸರ್ಕಾರಿ ನೌಕರರಾಗಿರಬಾರದು. ಮಗುವಿನ ತಾಯಿಯ ಹೆಸರಿನಲ್ಲಿ ಕಡ್ಡಾಯವಾಗಿ ಬ್ಯಾಂಕ್ ನಲ್ಲಿ ಜಂಟಿಖಾತೆ ಹೊಂದಿರಬೇಕು. ಪೋಷಕರು ಕಡ್ಡಾಯವಾಗಿ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹೊಂದಿರಬೇಕು. ಅರ್ಜಿ ಸಲ್ಲಿಸಿದ ನಂತರ ಹಾಗೂ ಪೂರ್ಣ ಪರಿಶೀಲನೆ ನಂತರ ಎ.1 ರ ನಂತರ ಜನಿಸಿದ ಪ್ರತಿ ಫಲಾನುಭವಿಗೆ 25,000 ರೂ.ಗಳನ್ನು ಆಯ್ಕೆಯಾದ ಪಾಲುದಾರ ಹಣಕಾಸು ಸಂಸ್ಥೆಯಿಂದ ನಿಶ್ಚಿತ ಠೇವಣಿ ಇರಿಸಲಾಗುವುದೆಂಬ ಷರತ್ತಿದೆ ಎಂದರು.
ಅರ್ಜಿ ಸಲ್ಲಿಸಿದ ಫಲಾನುಭವಿಗಳ ಅರ್ಜಿಯನ್ನು ಆಯುಕ್ತರ ನೇತೃತ್ವದ ಪರಿಶೀಲನಾ ಸಮಿತಿಯು ಪ್ರತಿ 15 ದಿನಗಳಿಗೊಮ್ಮೆ ಸಭೆ ಸೇರಿ ಪ್ರತಿ ತಿಂಗಳು ಎರಡು ಬ್ಯಾಚ್ ಗಳಂತೆ ಅರ್ಜಿ ಪರಿಶೀಲನೆ ಮಾಡಿ ಬ್ಯಾಂಕ್ ನಿಂದ ಬಾಂಡ್ ಪಡೆದು ಫಲಾನುಭವಿಗಳಿಗೆ ಬಾಂಡ್ ವಿತರಿಸಲು ಕ್ರಮವಹಿಸಲಾಗುವುದು ಎಂದರು. ಪರಿಶೀಲನಾ ಸಮಿತಿಯಲ್ಲಿ ಆಯುಕ್ತರು, ಹೆಚ್ಚುವರಿ ಆಯುಕ್ತರು, ಉಪ ಆಯುಕ್ತರು, ಪಾಲಿಕೆಯ ಆರೋಗ್ಯಾಧಿಕಾರಿಗಳು, ರಿಜಿಸ್ಟ್ರಾರ್ ಇರುತ್ತಾರೆ ಎಂದರು.
ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ವತಿಯಿಂದ ಪ್ರಸ್ತುತ ಸುಮಾರು 1,56,000 ಗ್ರಾಹಕರಿಗೆ ನೀರು ಸರಬರಾಜು ಮಾಡಲಾಗುತ್ತಿದ್ದು, ಪ್ರಸ್ತುತ ನೀರಿನ ಶುಲ್ಕವನ್ನು ಗ್ರಾಹಕರು ವಾಣಿ ವಿಲಾಸ ನೀರು ಸರಬರಾಜಿನ 16 ಸೇವಾ ಕೇಂದ್ರಗಳು ಹಾಗೂ ಮೈಸೂರು ವನ್ ಮೂಲಕ ಹಾಗೂ ಆಯುಕ್ತರ ಖಾತೆಗೆ ಚೆಕ್/ಡಿಡಿ/ನಗದು ಮುಖಾಂತರ ಪಾವತಿಸುವ ವ್ಯವಸ್ಥೆಯಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ನೀರಿನ ಶುಲ್ಕವನ್ನು ಗ್ರಾಹಕರು ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ ರವರ ಪೋರ್ಟಲ್ ಮೂಲಕ ಪಾವತಿಸುವ ಸೌಲಭ್ಯ ಇಂದಿನಿಂದ ಪ್ರಾರಂಭಿಸಲಾಗಿದೆ ಎಂದರು. ಪ್ಲಾಟ್ ಪಾರ್ಮ್ ನಲ್ಲಿ ನೋಂದಾಯಿತ ಎಲ್ಲಾ ಬ್ಯಾಂಕ್ ಗಳ ಮೂಲಕ ಇ-ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಉಪಮೇಯರ್ ಶಫಿ ಅಹ್ಮದ್, ಪಾಲಿಕೆಯ ಆಯುಕ್ತೆ ಶಿಲ್ಪನಾಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.