×
Ad

ಸಿದ್ದರಾಮಯ್ಯ ನೀಡಿದ ಅನ್ನ ತಿಂದು ಮೋದಿಗೆ ಮತ ಹಾಕಿದ್ದಾರೆ: ಮಾಜಿ ಸಂಸದ ಮುನಿಯಪ್ಪ

Update: 2019-06-29 18:24 IST

ಕೋಲಾರ, ಜೂ.29: ಸಿದ್ದರಾಮಯ್ಯ ನೀಡಿದ ಅನ್ನಭಾಗ್ಯದ ಅನ್ನ ತಿಂದು ಇಂದು ಮೋದಿಗೆ ವೋಟ್ ಹಾಕಿದ್ದಾರೆ. ನನ್ನಿಂದ ಗೆದ್ದವರೇ ಇಂದು ಪಕ್ಷ ವಿರೋಧಿ ಚಟುವಟಿಕೆ ಮಾಡಿರುವುದು ಬೇಸರ ತಂದಿದೆ. ಸಮ್ಮಿಶ್ರ ಸರ್ಕಾರದ ಉಳಿವಿಗಾಗಿ ನಾನು ಸುಮ್ಮನಿದ್ದೇನೆ. ಮುಂದೆ ಈ ಬಗ್ಗೆ ಮಾತನಾಡುತ್ತೇನೆ ಎಂದು ಮಾಜಿ ಸಂಸದ ಕೆ‌.ಹೆಚ್.ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಕೋಲಾರದ ತಮ್ಮ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಕಾರಣ ಕೋಲಾರದಲ್ಲಿ ಕೋಚ್ ಫ್ಯಾಕ್ಟರಿ ಪೂರ್ಣಗೊಳ್ಳಲು ಸಾಧ್ಯವಾಗಿಲ್ಲ. ನಾನು ಸಾಕಷ್ಟು ಒತ್ತಾಯ ಮಾಡಿದ್ದೆ. ಆದರೆ ಕೇಂದ್ರ ರೈಲ್ವೆ ಮಂತ್ರಿ ಗೋಯಲ್ ರಿಂದ ಸರಿಯಾಗಿ ಪ್ರತಿಕ್ರಿಯೆ ಸಿಗಲಿಲ್ಲ. ರಾಜ್ಯ ಸರ್ಕಾರ ಇದಕ್ಕೆ ಹಣ ಮೀಸಲಿಟ್ಟಿದೆ. ಆದರೆ ಬಿಜೆಪಿ ಸರ್ಕಾರ ಬಂದಿದ್ದರಿಂದ ಕೆಲಸ ಆಗಿಲ್ಲ ಎಂದು ದೂರಿದರು.

ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಮುಂದುವರೆಯಲಿದೆ. ಆದರೆ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತೇವೆ. ಇದು ಜನಾದೇಶವಾಗಿದೆ. ಕೇಂದ್ರದ ನಾಯಕರು ಈ ಬಗ್ಗೆ ಒಪ್ಪಿಗೆ ನೀಡಿದ್ದಾರೆ ಎಂದ ಅವರು, ಲೋಕಸಭಾ ಚುನಾವಣೆಯಲ್ಲಿ ಮುಖಂಡರು ಮೈತ್ರಿಯಡಿ ಒಂದಾಗಿದ್ದರು. ಆದರೆ ಪಕ್ಷದ ಕಾರ್ಯಕರ್ತರು ಒಂದಾಗಿಲ್ಲ. ಈ ಚುನಾವಣೆಯಲ್ಲಿ ಪಾಠ ಕಲಿತಿದ್ದೇವೆ. ಇದು ನಮ್ಮ ಮೂರ್ಖತನ. ಆದರೆ ಮುಂದೆ ಇದು ಆಗಲು ಬಿಡುವುದಿಲ್ಲ ಎಂದು ಹೇಳಿದರು.

ಪ್ರಧಾನಿ ಮೋದಿ ತಂತ್ರಗಾರಿಕೆಯಿಂದ ಈ ಬಾರಿ ಚುನಾವಣೆ ಗೆದ್ದಿದ್ದಾರೆ. ಫುಲ್ವಾಮಾ ಮತ್ತು ಏರ್ ಸ್ಟ್ರೈಕ್ ಹೆಸರಲ್ಲೇ ಚುನಾವಣೆ ಗೆದ್ದಿದ್ದಾರೆ ಎಂದ ಅವರು, ಜುಲೈ 22, 23 ರಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರು ಕೋಲಾರ ಜಿಲ್ಲಾ ಪ್ರವಾಸ ಮಾಡಲಿದ್ದು, ಪಕ್ಷ ಸಂಘಟನೆಗೆ ಒತ್ತು ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿಸೇಗೌಡ, ಕೆ.ಚಂದ್ರಾರೆಡ್ಡಿ, ಮಾವು, ದಳಸನೂರು ಗೋಪಾಲಕೃಷ್ಣ, ಝಮೀರ್ ಪಾಷಾ, ಜನಘಟ್ಟ ವೆಂಕಟಮುನಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಜೆ.ಶ್ರೀನಿವಾಸ್, ರಾಮಚಂದ್ರಪ್ಪ, ನಾರಾಯಣಸ್ವಾಮಿ, ಇಕ್ಬಾಲ್ ಅಹಮದ್, ಅಫ್ರೋಜ್ ಪಾಷಾ, ಜಯದೇವ್, ಗಂಗಮ್ಮನಪಾಳ್ಯ ರಾಮಯ್ಯ,ಹೆಚ್.ವಿ.ಕುಮಾರ್, ಇಂಟಕ್ ಅಧ್ಯಕ್ಷ ಹೊನ್ನೇನಹಳ್ಳಿ ಯಲ್ಲಪ್ಪ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News