ವರ್ಗಾವಣೆಗೊಂಡ ಶಿಕ್ಷಕ: ಶಾಲೆ ಬಿಟ್ಟು ಹೋಗದಂತೆ ಕಣ್ಣೀರಿಟ್ಟ ವಿದ್ಯಾರ್ಥಿಗಳು
ಚಿಕ್ಕಮಗಳೂರು, ಜೂ.29: ಉತ್ತಮ ಶಿಕ್ಷಕನಿಂದ ಮಾತ್ರ ಉತ್ತಮ ಪ್ರಜೆಗಳು ಹುಟ್ಟುತ್ತಾರೆಂಬ ಮಾತಿದೆ. ಉತ್ತಮ ಶಿಕ್ಷಕನಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎನ್ನಲಾಗುತ್ತದೆ. ಉತ್ತಮ ಶಿಕ್ಷಕನಾದವನು ಶಾಲಾ ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಬಲ್ಲ. ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸ ಗಳಿಸುವ ಶಿಕ್ಷಕನ ಪಾಲಿಗೆ ಅದೇ ಕೋಟಿ ರೂಪಾಯಿಗಿಂತ ಮಿಗಿಲಾಗಿರುತ್ತದೆ. ಹೀಗೆ ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಪಾಠ ಮಾಡುತ್ತಿದ್ದ ಶಿಕ್ಷಕನೋರ್ವ ನಾಳೆಯಿಂದ ಶಾಲೆಗೆ ಬರುವುದಿಲ್ಲ ಎಂಬ ಸುದ್ದಿ ತಿಳಿದ ವಿದ್ಯಾರ್ಥಿಗಳು ಶಿಕ್ಷಕನನ್ನು ಹೋಗಲು ಬಿಡದೇ ಕಣ್ಣೀರು ಹಾಕಿದ ಘಟನೆಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಚಿಕ್ಕಮಗಳೂರು ನಗರ ಸಮೀಪದ ಕೈಮರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂತಹ ಒಂದು ಘಟನೆಗೆ ಸಾಕ್ಷಿಯಾಗಿದ್ದು, ಈ ಶಾಲೆಯಲ್ಲಿ ಕಳೆದ 12 ವರ್ಷಗಳಿಂದ ಮಕ್ಕಳಿಗೆ ಪಾಠ ಮಾಡುತ್ತಿದ್ದ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕ ದುರ್ಗೇಶ್ ಅವರಿಗೆ ಇತ್ತೀಚೆಗೆ ಬೇರೆಡೆಗೆ ವರ್ಗಾವಣೆಯಾಗಿತ್ತು.
ಬೇರೆಡೆ ವರ್ಗಾವಣೆಯಾಗಿದ್ದ ಶಿಕ್ಷಕ ಶನಿವಾರ ಶಾಲೆಯ ಇತರ ಶಿಕ್ಷಕರನ್ನು ಮಾತನಾಡಿಸಿಕೊಂಡು ಹೋಗಲು ಬಂದಿದ್ದರು. ದುರ್ಗೇಶ್ ಅವರಿಗೆ ವರ್ಗಾವಣೆಯಾದ ವಿಷಯ ಮಕ್ಕಳಿಗೆ ತಿಳಿದಿರಲಿಲ್ಲ. ಶನಿವಾರ ಶಾಲೆಗೆ ಬಂದಿದ್ದ ಶಿಕ್ಷಕನಿಗೆ ವರ್ಗಾವಣೆಯಾದ ವಿಷಯ ಅದೇಗೂ ಶಾಲಾಮಕ್ಕಳಿಗೆ ತಿಳಿದಿದೆ. ಇದರಿಂದ ಬೇಸರಗೊಂಡ ವಿದ್ಯಾರ್ಥಿಗಳು ಶನಿವಾರ ಮಧ್ಯಾಹ್ನ ಶಾಲೆ ಬಿಡುವ ಹೊತ್ತಿನಲ್ಲಿ ಶಿಕ್ಷಕನಿಗೆ ಮುತ್ತಿಗೆ ಹಾಕಿ ಶಾಲೆಯಿಂದ ಬೇರೆಡೆಗೆ ಹೋಗಲೇ ಬಾರದು, ಇಲ್ಲೇ ಇರಬೇಕೆಂದು ಕಣ್ಣೀರಿಡುತ್ತಾ ಗೋಗರೆದಿದ್ದಾರೆ.
ಈ ವೇಳೆ ಶಿಕ್ಷಕ ಎಷ್ಟೇ ಸಮಾದಾನ ಮಾಡಿದರೂ ಪಟ್ಟು ಬಿಡದ ಮಕ್ಕಳು ಶಿಕ್ಷಕನ ಕೈ ಕಾಲು ಹಿಡಿದು ಕಣ್ಣೀರಿಡುತ್ತಲೇ ಸ್ಥಳ ಬಿಟ್ಟು ಕದಲದಂತೆ ಮುತ್ತಿಕೊಂಡಿದ್ದಾರೆ. ಸರಕಾರಿ ಆದೇಶದ ಮೇರೆಗೆ ಬೇರೆಡೆಗೆ ಹೋಗಲೇಬೇಕೆಂದರು ಶಿಕ್ಷಕ ಹೇಳಿದರೂ ನಾವು ಬಿಇಒ ಜತೆಗೆ ಮಾತನಾಡುತ್ತೇವೆ. ತಾವು ಈ ಶಾಲೆಯಿಂದ ಹೋಗಬಾರದು ಎಂದು ಕಣ್ಣೀರು ಹಾಕಿದ್ದಾರೆ.
ಮಕ್ಕಳ ಮಾತಿಗೆ ಸ್ಥಳದಲ್ಲಿದ್ದ ಕೆಲ ಪೋಷಕರು ಬೆಂಬಲ ಸೂಚಿಸಿ ಬಿಇಒ ಅವರೊಂದಿಗೆ ನಾವು ಮಾತನಾಡುತ್ತೇವೆ. ಮಕ್ಕಳ ಶಿಕ್ಷಣದ ದೃಷ್ಟಿಯಿಂದಾದರೂ ಇಲ್ಲಿಯೇ ಇರಿ ಎಂದು ಒತ್ತಾಯಿಸಿದಾಗ, ಬಿಇಒ ಅವರೊಂದಿಗೆ ಮಾತನಾಡಿ ವರ್ಗಾವಣೆಯನ್ನು ರದ್ದು ಮಾಡಲು ಮನವಿ ಮಾಡುವುದಾಗಿ ಹೇಳಿದ್ದರಿಂದ ವಿದ್ಯಾರ್ಥಿಗಳು ಕಣ್ಣೀರಿಡುತ್ತಲೇ ಸ್ಥಳದಿಂದ ಕದಲಿದ್ದಾರೆ.
ಈ ಎಲ್ಲಾ ದೃಶ್ಯಗಳನ್ನು ವಿದ್ಯಾರ್ಥಿಗಳ ಪೋಷಕರು ವಿಡಿಯೋ ಮಾಡಿದ್ದು, ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶಿಕ್ಷಕನೋರ್ವ ಮನೆಮಾಡಿದ ಬಗೆ ಕಂಡು ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.