ಜುಲೈ 1ಕ್ಕೆ ಸಂಡೂರಿನಲ್ಲಿ ಕರಾಳ ದಿನ ಆಚರಣೆ: ವಾಟಾಳ್ ನಾಗರಾಜ್ ಎಚ್ಚರಿಕೆ

Update: 2019-06-29 14:38 GMT

ಬೆಂಗಳೂರು, ಜೂ.29: ಜಿಂದಾಲ್ ಕಂಪನಿಯ ವಿರುದ್ಧ ಶಾಂತಿಯುತವಾಗಿ ಚಳವಳಿ ಮಾಡುತ್ತಿದ್ದ ಕಾರ್ಯಕರ್ತರ ಮೇಲೆ ಮೊಕದ್ದಮೆ ಹೂಡಿರುವುದನ್ನು ವಿರೋಧಿಸಿ ಜು.1ರಂದು ಕಪ್ಪು ಬಟ್ಟೆ ಧರಿಸಿ ಸಂಡೂರು ತಹಸಿಲ್ದಾರ್ ಕಚೇರಿ ಎದುರು ಕರಾಳ ದಿನ ಆಚರಿಸುವುದಾಗಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್ ಕಂಪನಿಯ ಹಗಲು ದರೋಡೆ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡದೆ ಸುಮ್ಮನಿದೆ. ಬಿಜೆಪಿ ಕೇವಲ ಎರಡು ದಿನ ಮಾತ್ರ ನಾಟಕೀಯವಾಗಿ ಪ್ರತಿಭಟನೆ ನಡೆಸಿ ಸುಮ್ಮನಾಗಿದೆ. ಆದರೆ ಮುಖ್ಯಮಂತ್ರಿಗಳು ಈ ಪ್ರಕರಣ ಕುರಿತಂತೆ ಕಾಟಾಚಾರದ ತನಿಖೆ ನಡೆಸಲು ಸಮಿತಿ ರಚಿಸಿದ್ದಾರೆ ಎಂದು ದೂರಿದರು.

1995 ರಿಂದ ಇಲ್ಲಿಯವರೆಗೆ ಜಿಂದಾಲ್ ಕಂಪನಿಗೆ 11 ಸಾವಿರ 500 ಎಕರೆ ಭೂಮಿ ನೀಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ಆಗುವ ಅಗತ್ಯವಿದೆ. 1,500 ಕೋಟಿ ತೆರಿಗೆ ಹಣವನ್ನು ಈ ಕಂಪೆನಿ ವಂಚಿಸಿದ್ದು, ಈ ಬಗ್ಗೆ ವಿಶೇಷ ಅಧಿವೇಶನ ಕರೆದು ಚರ್ಚೆ ಮಾಡಬೇಕು. ಜೊತೆಗೆ ಈ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಅಥವಾ ಸಿಬಿಐನಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಜಿಂದಾಲ್ ಕಂಪನಿಯ ಹಗಲು ದರೋಡೆ ವಿರುದ್ಧ ಶಾಂತಿಯುತವಾಗಿ ಹೋರಾಟ ನಡೆಸುತ್ತಿರುವ ಕಾರ್ಯಕರ್ತರ ಮೇಲೆ ಸಂಡೂರಿನ ತಹಸೀಲ್ದಾರ್ ವಿನಾಕಾರಣ ಸುಳ್ಳು ಮೊಕದ್ದಮೆ ಹೂಡಿದ್ದಾರೆ. ನಿರಪರಾಧಿ ಕನ್ನಡ ಹೋರಾಟಗಾರರ ಮೇಲೆ ಈ ರೀತಿ ಮೊಕದ್ದಮೆ ಹಾಕಿರುವುದು ಬಳ್ಳಾರಿಯಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿದೆ. ಹಾಗಾಗಿ ತಹಸೀಲ್ದಾರ್ ಕ್ರಮ ವಿರೋಧಿಸಿ ಜುಲೈ 1ರಂದು ಕಪ್ಪು ಬಟ್ಟೆ ಧರಿಸಿ ಕರಾಳ ದಿನ ಆಚರಿಸಲಾಗುವುದು ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಚಳವಳಿಗಾರರ ಮೇಲೆ ಹೂಡಿರುವ ಮೊಕದ್ದಮೆ ವಾಪಸ್ ಪಡೆಯಬೇಕು. ಜಮೀನನ್ನು ಯಾವುದೇ ಕಾರಣಕ್ಕೂ ಕಂಪನಿಗೆ ನೀಡಲೇಬಾರದು. ಸರಕಾರ ನಮ್ಮ ಮನವಿಯನ್ನು ಪುರಸ್ಕರಿಸದಿದ್ದರೆ ಜೈಲ್ ಚಳವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News