×
Ad

ಜಿಂದಾಲ್ ಗೆ ಭೂಮಿ ಮಾರಾಟ ವಿಚಾರ: ಗೃಹ ಸಚಿವರಿಗೆ ಪತ್ರ ಬರೆದ ಎಚ್.ಕೆ.ಪಾಟೀಲ್‌

Update: 2019-06-29 20:11 IST

ಬೆಂಗಳೂರು, ಜೂ. 29: ಬಳ್ಳಾರಿಯ ಜಿಂದಾಲ್ ಕಂಪೆನಿಗೆ 3,666 ಎಕರೆ ಭೂಮಿ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲು ರಾಜ್ಯದ ಸಮಗ್ರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್, ಸಂಪುಟ ಉಪಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಎಂ.ಬಿ.ಪಾಟೀಲ್‌ಗೆ ಮೂರ ಪುಟಗಳ ಪತ್ರ ಬರೆದಿದ್ದಾರೆ.

ರಾಜ್ಯ ಸರಕಾರ ಈ ಹಿಂದೆ ಲೀಸ್ ಕಮ್ ಸೇಲ್ ಡೀಡ್‌ನಲ್ಲಿ ಕಾಣಿಸಿದ ಕರಾರುಗಳು ಪಾಲನೆಯಾಗಿವೆಯೆ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಜಿಂದಾಲ್ ಕಂಪೆನಿಗೆ ಪ್ರತಿ ಎಕರೆಗೆ 1.22 ಲಕ್ಷ ರೂ.ನಷ್ಟು ಕಡಿಮೆ ಬೆಲೆಗೆ ಕ್ರಯಪತ್ರ ಮಾಡಿಕೊಡುವುದು ಸಮಂಜಸವೇ? ಇದರಿಂದ ಸರಕಾರಕ್ಕೆ ಆಗುವ ಹಾನಿ ಬಗ್ಗೆ ಅಂದಾಜಿಸಲಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಸಾರ್ವಜನಿಕ ಆಸ್ತಿ ಪರಭಾರೆ, ಕೈಗಾರಿಕಾ ನೀತಿಯ ಮಾರ್ಗಸೂಚಿಗಳು ಪಾಲನೆಯಾಗಿವೆಯೇ? ಮೈಸೂರು ಮಿನರಲ್ಸ್ ಜೊತೆ ಮಾಡಿಕೊಂಡ ಅದಿರು ಅಧಿಕ ಮೌಲ್ಯವನ್ನು ಪಾವತಿಸುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಅದನ್ನು ಜಿಂದಾಲ್ ಸಂಸ್ಥೆ ಪಾಲಿಸಿದೆಯೇ? ಎಜಿ ಶಿಫಾರಸುಗಳನ್ನು ಪರಿಶೀಲಿಸಲಾಗಿದೆಯೇ? ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಕೋರಿದ್ದಾರೆ.

‘ಜಿಂದಾಲ್ ಕಂಪೆನಿಗೆ ಭೂಮಿ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಭೂ ಪರಿಶೋಧನೆ ಆಗಬೇಕು. ಸಚಿವ ಸಂಪುಟ ಉಪ ಸಮಿತಿ ಕೂಡಲೇ ಆ ಕಾರ್ಯಕ್ಕೆ ಮುಂದಾಗಬೇಕು. ಉಪ ಸಮಿತಿ ಹೇಗೆ ಕೆಲಸ ಮಾಡಲಿದೆ ಎಂಬುದು ಗೊತ್ತಿಲ್ಲ. ನನ್ನ ಬಳಿ ಮಾಹಿತಿ ಕೇಳಿದರೆ ವಿಚಾರ ಮಾಡುತ್ತೇನೆ’

-ಎಚ್.ಕೆ.ಪಾಟೀಲ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News