ಹಾಡಹಗಲೇ ಮಾರಕಾಸ್ತ್ರಗಳಿಂದ ಕಡಿದು ಯುವಕನ ಬರ್ಬರ ಹತ್ಯೆ
Update: 2019-06-29 20:43 IST
ಮೈಸೂರು,ಜೂ.29: ಹಾಡಹಗಲೇ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರು-ಊಟಿ ರಸ್ತೆಯ ಜೆಎಸ್‍ಎಸ್ ಕಾಲೇಜು ಬಳಿ ನಡೆದಿದೆ.
ಮೃತ ವ್ಯಕ್ತಿ ಗೌರಿಶಂಕರ ನಗರದ ನಿವಾಸಿ ಸುನೀಲ್ (30) ಎಂದು ಗುರುತಿಸಲಾಗಿದೆ. ಈತ ಕೆ.ಆರ್.ಮಾರುಕಟ್ಟೆಯಲ್ಲಿ ಅಂಗಡಿ ಇಟ್ಟುಕೊಂಡಿದ್ದು, ಬಡ್ಡಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಎನ್ನಲಾಗಿದೆ.
ಸುನೀಲ್ ಮಧ್ಯಾಹ್ನದ ಊಟ ಮುಗಿಸಿ ಸಂಜೆ ನಾಲ್ಕು ಗಂಟೆ ವೇಳೆಗೆ ಅಂಗಡಿಗೆ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳು, ಏಕಾಏಕಿ ಆತನ ಮೇಲೆರಗಿ ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕೆ.ಆರ್.ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದು, ಹಣದ ವಿಚಾರಕ್ಕೆ ಈ ಘಟನೆ ನಡೆದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.