ಹುತಾತ್ಮ ಪೊಲೀಸ್ ಅಧಿಕಾರಿ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ: ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ

Update: 2019-06-29 16:13 GMT

ಕಲಬುರಗಿ, ಜೂ. 29: ಛತ್ತಿಸ್‌ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಡೆದ ನಕ್ಸಲ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಕಲಬುರಗಿ ಜಿಲ್ಲೆ ಮರಗುತ್ತಿ ಗ್ರಾಮದ ಸಬ್ ಇನ್ಸ್ಪೆಕ್ಟರ್ ಮಹಾದೇವ ಅವರ ಕುಟುಂಬಕ್ಕೆ ರಾಜ್ಯ ಸರಕಾರದಿಂದ 25 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಕಟಿಸಿದ್ದಾರೆ.

ಶನಿವಾರ ಮರಗುತ್ತಿ ಗ್ರಾಮಕ್ಕೆ ಆಗಮಿಸಿ ಮಹಾದೇವ ಅವರ ಪಾರ್ಥಿವ ಶರೀರಕ್ಕೆ ರಾಜ್ಯ ಸರಕಾರದ ಪರವಾಗಿ ಶ್ರದ್ಧಾಂಜಲಿ ಅರ್ಪಿಸಿದ ಬಳಿಕ ಮಾಧ್ಯಮದ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮಹಾದೇವ ಅವರ ತ್ಯಾಗ ಹಾಗೂ ಬಲಿದಾನಕ್ಕೆ ಬೆಲೆ ಕಟ್ಟಲಾಗದು. ಅವರು ಗ್ರಾಮದ ಬಹಳಷ್ಟು ಯುವಕರಿಗೆ ತಮ್ಮ ಆದರ್ಶ ವ್ಯಕ್ತಿತ್ವದಿಂದ ಮಾರ್ಗದರ್ಶನ ನೀಡುತ್ತಿದ್ದರು ಎಂದು ನನಗೆ ತಿಳಿದು ಬಂದಿದೆ ಎಂದು ಶ್ಲಾಘಿಸಿದ ಸಚಿವರು, ಅವರನ್ನು ಕಳೆದುಕೊಂಡ ದುಃಖ ಭರಿಸುವ ಶಕ್ತಿ ಕುಟುಂಬ ವರ್ಗದವರಿಗೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.

ತಕ್ಷಣವೇ ಮೃತರ ಕುಟುಂಬ ವರ್ಗದವರಿಗೆ ಪರಿಹಾರದ ಚೆಕ್ ವಿತರಿಸುವುದು. ಈ ಕುರಿತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಜತೆ ಸಮಾಲೋಚನೆ ನಡೆಸಿದ್ದೇನೆ. ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ಉದ್ಯೋಗ ಕೊಡಿಸುವ ಸಂಬಂಧ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News