ಸಂಜೀವ್ ಭಟ್ ಪತ್ನಿಯನ್ನು ಭೇಟಿಯಾದ ಎಸ್‌ಡಿಪಿಐ ನಿಯೋಗ

Update: 2019-06-29 16:56 GMT

ಬೆಂಗಳೂರು, ಜೂ.29: 30 ವರ್ಷಗಳ ಹಿಂದೆ ನಡೆದ ಕಸ್ಟಡಿ ಸಾವು ಪ್ರಕರಣಕ್ಕೆ ಸಂಬಂಧಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಗುಜರಾತಿನ ಉಚ್ಚಾಟಿತ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಪತ್ನಿ ಶ್ವೇತಾ ಭಟ್ ಅವರಿಗೆ ಕಾನೂನು ಸಹಾಯ ಸೇರಿದಂತೆ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಭರವಸೆ ನೀಡಿದೆ.

ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಫಿ ನೇತೃತ್ವದ ನಿಯೋಗ ಇತ್ತೀಚೆಗೆ ಅಹ್ಮದಾಬಾದ್‌ನಲ್ಲಿ ಶ್ವೇತಾ ಅವರನ್ನು ಭೇಟಿಯಾಗಿ ಈ ಭರವಸೆ ನೀಡಿತು. ಪಕ್ಷದ ಗುಜರಾತ್ ಕಾರ್ಯದರ್ಶಿಗಳಾದ ಇಕ್ರಮುದ್ದೀನ್ ಶೇಕ್ ಮತ್ತು ಫಾರೂಕ್ ಅನ್ಸಾರಿ, ಅಡ್ವೊಕೇಟ್ ಫೈಸಲ್ ಈ ನಿಯೋಗದಲ್ಲಿದ್ದರು.

ಉನ್ನತ ನ್ಯಾಯಾಲಯಗಳು ಈ ಪ್ರಕರಣದ ವಿರುದ್ಧ ವ್ಯತಿರಿಕ್ತ ನಿಲುವನ್ನು ತೆಗೆದುಕೊಳ್ಳುತ್ತದೆ ಮತ್ತು ಭಟ್ ಅವರು ಜೈಲಿನಿಂದ ಮುಕ್ತರಾಗಿ ಹೊರಬರುತ್ತಾರೆ ಎಂದು ನಾನು ಭಾವಿಸುತ್ತೇನೆ. ಈ ವ್ಯಕ್ತಿಯನ್ನು ಸಂಪೂರ್ಣವಾಗಿ ಸೋಲಿಸಿದ್ದೇವೆ ಎಂದು ಪ್ರಭುತ್ವವು ಭಾವಿಸುತ್ತದೆಯೇ ಅಥವಾ ಸರಕಾರ ಮತ್ತೊಂದು ಪ್ರಕರಣದಲ್ಲಿ ಅವರನ್ನು ಬೇಟೆಯಾಡಲು ಹವಣಿಸುತ್ತಿದೆಯೇ? ಎಂದು ಶಾಫಿ ಖಾರವಾಗಿ ಪ್ರಶ್ನಿಸಿದ್ದಾರೆ. ತಾವು ತೆಗೆದುಕೊಂಡ ದಿಟ್ಟ ಹಾಗೂ ತತ್ವಬದ್ಧ ನಿಲುವಿಗಾಗಿ ಸಂಜೀವ್ ಭಟ್ ಇಂದು ಭಾರೀ ಬೆಲೆ ತೆರುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಮೊದಲು ಅವರನ್ನು ಕೆಲಸದಿಂದ ಅಮಾನತು ಗೊಳಿಸಲಾಯಿತು. ಬಳಿಕ ಅವರನ್ನು ಕೆಲಸದಿಂದ ವಜಾಗೊಳಿಸಲಾಯಿತು ಎಂದು ಅವರು ಹೇಳಿದ್ದಾರೆ. 2011ರಲ್ಲಿ ಅವರನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಅವರಿಗೆ ನೀಡಿರುವ ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸಿ ಗುಜರಾತ್ ಸರಕಾರ ಅವರನ್ನು ಜೈಲಿನ ಕಂಬಿಗಳ ಹಿಂದೆ ಇಡಲು ಪ್ರಯತ್ನಿಸಿತು. 1996ರ ಮಾದಕ ವಸ್ತು ಇಟ್ಟ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು 2018ರ ಸೆಪ್ಟಂಬರ್‌ನಲ್ಲಿ ಮತ್ತೊಮ್ಮೆ ಬಂಧಿಸಲಾಯಿತು. ಈಗಲೂ ಅವರು ಅದೇ ಪ್ರಕರಣದಲ್ಲಿ ಜೈಲಿನಲ್ಲೇ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅವರು ತಮ್ಮ ಪ್ರಾಮಾಣಿಕತೆ, ಅಚಲತೆ ಮತ್ತು ನಿರ್ಭಯತೆಗಾಗಿ ಬೆಲೆ ತೆರುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಸತ್ಯವನ್ನು ಹೇಳಲು ಅವರು ಧೈರ್ಯ ತೋರಿದರು ಮತ್ತು ಸುಳ್ಳು ಮತ್ತು ಕೆಟ್ಟದ್ದರ ವಿರುದ್ಧ ಎದ್ದು ನಿಂತರು. ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರು ಅವರ ಧೈರ್ಯ ಮತ್ತು ಪ್ರಾಮಾಣಿಕತೆಗಾಗಿ ಅವರಿಗೆ ಧನ್ಯವಾದ ಸಲ್ಲಿಸಬೇಕು ಮತ್ತು ಅವರನ್ನು ಬೆಂಬಲಿಸಬೇಕು ಎಂದು ಮುಹಮ್ಮದ್ ಶಾಫಿ ತಿಳಿಸಿದ್ದಾರೆ.

ನ್ಯಾಯಾಲಯದಿಂದ ರಚಿಸಲ್ಪಟ್ಟ ವಿಶೇಷ ತನಿಖಾ ತಂಡ (ಎಸ್‌ಐಟಿ) ನರೇಂದ್ರ ಮೋದಿ ಅವರ ಪರವಾಗಿ ಪಕ್ಷಪಾತ ನಿಲುವು ಹೊಂದಿತ್ತು. ಸಿಟ್ ವರದಿಯನ್ನು ಪರಿಶೀಲಿಸಿದ ನ್ಯಾಯಾಲಯದಿಂದ ನೇಮಿಸಲ್ಪಟ್ಟ ಅಮಿಕಸ್ ಕ್ಯೂರಿ, ನರೇಂದ್ರ ಮೋದಿಯನ್ನು ವಿಚಾರಣೆಗೆ ಒಳಪಡಿಸಲು ವರದಿಯಲ್ಲಿ ಸಾಕಷ್ಟು ಸಾಕ್ಷಾಧಾರಗಳಿವೆ ಎಂದು ಹೇಳಿತ್ತು. ಆದರೆ ವಿಶೇಷ ತನಿಖಾ ತಂಡದ ಮುಖ್ಯಸ್ಥ ಆರ್.ಕೆ. ರಾಘವನ್ ಅದನ್ನು ಏಕಪಕ್ಷೀಯವಾಗಿ ತಳ್ಳಿಹಾಕಿದರು.

ಗುಜರಾತ್‌ನ ಗೋಧ್ರಾ ರೈಲು ದುರಂತದ ಸಂದರ್ಭದಲ್ಲಿ ಗುಜರಾತ್ ರಾಜ್ಯ ಗುಪ್ತಚರ ವಿಭಾಗದ ಉಪ ಗುಪ್ತಚರ ಆಯುಕ್ತರಾಗಿದ್ದ ಸಂಜೀವ್ ಭಟ್ ಅವರು 2011ರಲ್ಲಿ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿ, ಮುಸ್ಲಿಮರ ವಿರುದ್ಧ ತಮ್ಮ ಸೇಡು ತೀರಿಸಿಕೊಳ್ಳಲು ಹಿಂದೂ ಗುಂಪುಗಳಿಗೆ ಅವಕಾಶ ನೀಡುವಂತೆ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಅಂದಿನ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದರು ಎಂದು ತಿಳಿಸಿದ್ದನ್ನು ನಾವು ಇಲ್ಲಿ ಸ್ಮರಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿಂಸಾಚಾರ ಹರಡುವುದರ ಬಗ್ಗೆ ಮತ್ತು ಕಾಂಗ್ರೆಸ್ ನಾಯಕ ಎಹ್ಸಾನ್ ಜಾಫ್ರಿ ಜೀವಕ್ಕೆ ಅಪಾಯವಿದೆ ಎಂಬುದರ ಬಗ್ಗೆ ತಮ್ಮ ಕಾಳಜಿಯನ್ನು ರಾಜ್ಯ ಸರಕಾರ ಕಡೆಗಣಿಸಿತು ಎಂದು ಅವರು ಹೇಳಿಕೊಂಡಿದ್ದರು. ಕೋಮು ಹತ್ಯಾಕಾಂಡದ ತನಿಖೆಗಾಗಿ ರಚಿಸಲಾಗಿರುವ ಎಸ್‌ಐಟಿ ಒಂದು ದೊಡ್ಡ ಪಿತೂರಿಯನ್ನು ಮುಚ್ಚಿಹಾಕುತ್ತಿದೆ ಎಂದು ಭಟ್, ಸುಪ್ರೀಂಕೋರ್ಟ್ ಎದುರು ಆರೋಪಿಸಿದ್ದರು.

ಜೀವಾವಧಿ ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿರಬೇಕಾದವರು ಇಂದು ಸಾರ್ವಜನಿಕ ಬೊಕ್ಕಸದ ವೆಚ್ಚದಲ್ಲಿ ಆನಂದಮಯವಾಗಿ ಜೀವನ ನಡೆಸುತ್ತಿದ್ದಾರೆ ಎಂದು ಮುಹಮ್ಮದ್ ಶಾಫಿ ಪ್ರಕಟಣೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News