ಹೆಚ್ಚುತ್ತಿರುವ ದೌರ್ಜನ್ಯ: ದಲಿತ, ಮುಸ್ಲಿಮರ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಿ- ಇಲ್ಯಾಸ್ ತುಂಬೆ

Update: 2019-06-29 18:46 GMT

ಶಿವಮೊಗ್ಗ, ಜೂ. 29: ರಾಜ್ಯದಲ್ಲಿ ದಲಿತ ಹಾಗೂ ಮುಸ್ಲಿಂ ವರ್ಗಗಳಿಗೆ ಸೇರಿದ ವ್ಯಕ್ತಿಗಳ ಮೇಲೆ, ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಇದು ಭಯದ ವಾತಾವರಣ ಸೃಷ್ಟಿಸುತ್ತಿದ್ದು, ಈ ವರ್ಗಗಳ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು' ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ರಾಜ್ಯಾಧ್ಯಕ್ಷ ಇಲ್ಯಾಸ್ ಮಹಮ್ಮದ್ ತುಂಬೆ ಆಗ್ರಹಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ದೇಶದ ಪರಿಸ್ಥಿತಿ ಅವಲೋಕಿಸಿದಾಗ ದಲಿತರು ಮತ್ತು ಮುಸ್ಲಿಮರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಬಿಹಾರ ಹಾಗೂ ಜಾರ್ಖಂಡ್‍ನಲ್ಲಿ ಇಂತಹ ಪ್ರಕರಣಗಳು ಆಗಾಗ್ಗೆ ನಡೆಯುತ್ತಿವೆ. ರಾಜ್ಯದಲ್ಲಿ ಇತ್ತೀಚೆಗೆ ಪ್ರಕರಣಗಳು ಮರುಕಳಿಸಿ ಭಯಾನಕ ಸನ್ನಿವೇಶ ಉಂಟಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು

ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಜೂ.15 ರಂಂದು ದಯಾನತ್‍ ಖಾನ್ ಎಂಬಾತನ ಮೇಲೆ ಐವರು ಚಿತ್ರಹಿಂಸೆ ನೀಡಿ ಭೀಕರವಾಗಿ ಕೊಲೆ ಮಾಡಿದ್ದಾರೆ. ದೂರನ್ನು ಕೊಟ್ಟಿದ್ದರೂ ಸಹ ಇಬ್ಬರನ್ನು ಮಾತ್ರ ಬಂಧಿಸಿ ಉಳಿದವರನ್ನು ಪೊಲೀಸರು ಪತ್ತೆ ಹಚ್ಚದೆ ಹಾಗೂ ಎಫ್‍ಐಆರ್ ದಾಖಲಿಸದೇ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು. 

ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಪ್ರತಾಪ್ ಎಂಬುವರ ಮೇಲೆ ಹಲ್ಲೆ ನಡೆಸಿ ಬೆತ್ತಲೆ ಮೆರವಣಿಗೆ ಮಾಡಲಾಯಿತು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅಸ್ಲಂ ಎಂಬ ಯುವಕನ ಕೊಲೆಯಾಯಿತು. ಹೀಗೆ ರಾಜ್ಯದಲ್ಲಿ ನಿರಂತರವಾಗಿ ದುಷ್ಕೃತ್ಯಗಳು ನಡೆಯುತ್ತಿವೆ. ಅದರಲ್ಲೂ ಮುಸ್ಲಿಂ ಯುವಕರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಬಂಧಿಸಿ ದೌರ್ಜನ್ಯ ಮಾಡಲಾಗುತ್ತಿದೆ ಎಂದು ದೂರಿದರು.

ಮುಸ್ಲಿಂಮರು ಅಕ್ರಮವಾಗಿ ಗೋ ಸಾಗಿಸುತ್ತಿದ್ದಾರೆ ಎಂದು ಹಿಂದು ಸಂಘಟನೆಗಳ ಕಾರ್ಯಕರ್ತರು ಸುಳ್ಳು ಕೇಸು ದಾಖಲಿಸಿ ತೊಂದರೆ ನೀಡುತ್ತಿದ್ದಾರೆ. ಮುಸ್ಲಿಂಮರ ಮೇಲೆ ಹಲ್ಲೆಗಳು ನಡೆಸುತ್ತಿರುವ ಹಿಂದು ಸಂಘಟನೆಗಳಿಗೆ ಅಧಿಕಾರ ಕೊಟ್ಟವರು ಯಾರು ಎಂಬ ಪ್ರಶ್ನೆ ಉದ್ಬವವಾಗುತ್ತದೆ. ಹೀಗೆ ರಾಜ್ಯದಲ್ಲಿ ಇತಂಹ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸಹ ಮೈತ್ರಿ ಸರ್ಕಾರ ಖುರ್ಚಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆಯೇ ಹೊರತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ರಾಜ್ಯದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಕಿರುಕುಳಗಳು ನಡೆಯುತ್ತಲೇ ಇವೆ. ತಕ್ಷಣವೇ ಇದು ನಿಲ್ಲಬೇಕು. ದೌರ್ಜನ್ಯಕ್ಕೊಳಗಾದ ಸಂತ್ರಸ್ತರಿಗೆ ನ್ಯಾಯ ಕೊಡಿಸಬೇಕು. ಯಾರೇ ಅಪರಾಧ ಮಾಡಿದರೂ ನಿರ್ಧಾಕ್ಷಿಣ್ಯವಾಗಿ ಕ್ರಮಗೊಳ್ಳಬೇಕೆಂದು ಆಗ್ರಹಿಸಿದ ಅವರು, ದೌರ್ಜನ್ಯಗಳ ಬಗ್ಗೆ ರಾಜ್ಯಾದ್ಯಂತ ಪ್ರತಿಭಟನೆಯನ್ನು ನಡೆಸುತ್ತಿದ್ದು, ಜು.1 ರಂದು ಬೆಂಗಳೂರಿನ ಪುರಭವನದ ಎದುರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.  

ಗೋಷ್ಠಿಯಲ್ಲಿ ಎಸ್‍ಡಿಪಿಐ ರಾಜ್ಯ ಉಪಾಧ್ಯಕ್ಷ ಮಜೀದ್ ಖಾನ್, ಪ್ರಧಾನ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ, ಕಾರ್ಯದರ್ಶಿ ಅಪ್ಸರ್ ಕೂಡ್ಲಿಪೇಟೆ, ಸದಸ್ಯ ಅಮೀನ್ ಮೊಹ್ಸಿನ್, ಜಿಲ್ಲಾಧ್ಯಕ್ಷ ಸಲೀಂಖಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News