ಕೆಎಸ್‍ಆರ್‍ಟಿಸಿ ಬಸ್ ಚಾಲಕನ ಮೇಲೆ ಖಾಸಗಿ ಬಸ್ ಏಜೆಂಟ್‍ಗಳಿಂದ ಹಲ್ಲೆ: ಆರೋಪ

Update: 2019-06-29 18:48 GMT

ಶಿವಮೊಗ್ಗ, ಜೂ. 29: ಕೆಎಸ್‍ಆರ್‍ಟಿಸಿ ಬಸ್ ಚಾಲಕರೋರ್ವರ ಮೇಲೆ ಖಾಸಗಿ ವಾಹನ ಏಜೆಂಟ್‍ಗಳಿಬ್ಬರು ಹಲ್ಲೆ ನಡೆಸಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಾಳೂರು ಸಮೀಪ ನಡೆದಿದೆ. 

ಕೆಎಸ್‍ಆರ್‍ಟಿಸಿ ಬಸ್‍ನ ಚಾಲಕ ಕಂ ನಿರ್ವಾಹಕ ರಮೇಶ್‍ನಾಯ್ಕ್ ಹಲ್ಲೆಗೊಳಗಾದವರೆಂದು ಗುರುತಿಸಲಾಗಿದೆ. ಚೇತನ್ ಹಾಗೂ ಚೆನ್ನವೀರಪ್ಪ ಆರೋಪಿತ ವ್ಯಕ್ತಿಗಳಾಗಿದ್ದಾರೆ. ಮಾಳೂರಿನಲ್ಲಿ ಅಂಗಡಿಯಿಟ್ಟುಕೊಂಡಿರುವ ತಮ್ಮ ತಂದೆಯವರಿಗೂ ಆರೋಪಿಗಳು ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ರಮೇಶ್‍ ನಾಯ್ಕ್ ರವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಕೆಎಸ್‍ಆರ್‍ಟಿಸಿ ಬಸ್ ಚಾಲಕ ನೀಡಿದ ದೂರಿನ ಆಧಾರದ ಮೇಲೆ, ಮಾಳೂರು ಠಾಣೆ ಪೊಲೀಸರು ಆರೋಪಿಗಳಿಬ್ಬರ ವಿರುದಧ ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ-ಹಲ್ಲೆ ಪ್ರಕರಣಗಳಡಿ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

ಘಟನೆ ಹಿನ್ನೆಲೆ: ಹಣಗೆರೆಕಟ್ಟೆಗೆ ಒಂದೇ ಸಮಯಕ್ಕೆ ಎರಡು ವಾಹನಗಳು ಓಡಾಡುವ ವಿಚಾರದಲ್ಲಿ ಆರೋಪಿತ ಖಾಸಗಿ ವಾಹನದ ಏಜೆಂಟ್‍ಗಳು ಕೆಎಸ್‍ಆರ್‍ಟಿಸಿ ಬಸ್ ಚಾಲಕ ರಮೇಶ್‍ ನಾಯ್ಕ್ ರೊಂದಿಗೆ ಗಲಾಟೆ ಮಾಡಿದ್ದಾರೆ. ಹಣಗೆರೆಕಟ್ಟೆಗೆ ಬಸ್ ತರದಂತೆ ಬೆದರಿಸಿ, ಗಲಾಟೆ ನಡೆಸಿದ್ದಾರೆ ಎಂದು ಆಪಾದಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News