‘ಬರ ನಿರ್ವಹಣೆ’ ಜವಾಬ್ದಾರಿ ವಿರೋಧ ಪಕ್ಷಕ್ಕೂ ಇದೆ: ಸಚಿವ ಆರ್.ವಿ.ದೇಶಪಾಂಡೆ

Update: 2019-06-30 14:57 GMT

ಬೆಂಗಳೂರು, ಜೂ.30: ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಕೇವಲ ಆಡಳಿತ ಪಕ್ಷಕ್ಕೆ ಸೀಮಿತವಲ್ಲ. ವಿರೋಧ ಪಕ್ಷದವರಿಗೂ ಈ ವಿಚಾರದಲ್ಲಿ ಜವಾಬ್ದಾರಿಯಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ರವಿವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಪರಿಸ್ಥಿತಿಯನ್ನು ಎದುರಿಸುವ ವಿಚಾರದ ಕುರಿತು ವಿರೋಧ ಪಕ್ಷಗಳು ನೀಡುವ ಸಲಹೆಗಳನ್ನು ಸರಕಾರ ಸ್ವೀಕರಿಸಲಿದೆ. ಆದರೆ, ವಿನಾಕಾರಣ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದರು.

ಮುಖ್ಯಮಂತ್ರಿ ಅಮೆರಿಕಾ ಪ್ರವಾಸ ಕೈಗೊಂಡಿರುವುದರಲ್ಲಿ ಏನೂ ತಪ್ಪಿಲ್ಲ. ಈ ಸಂಬಂಧ ಬಿಜೆಪಿ ನಾಯಕರು ಮಾಡುತ್ತಿರುವ ಆರೋಪಗಳನ್ನು ನಾನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಒಕ್ಕಲಿಗ ಸಮುದಾಯದವರ ದೇವಾಲಯದ ಸ್ಥಾಪನೆಗೆ ಅಡಿಗಲ್ಲು ಹಾಕಲು ಮುಖ್ಯಮಂತ್ರಿ ಹೋಗಿದ್ದಾರೆ. ಅವರ ಜೊತೆ ಸ್ವಾಮೀಜಿಯೂ ತೆರಳಿದ್ದಾರೆ ಎಂದು ದೇಶಪಾಂಡೆ ಹೇಳಿದರು.

ಮುಖ್ಯಮಂತ್ರಿ ವಿದೇಶ ಪ್ರವಾಸ ಕೈಗೊಂಡಿರುವುದರಿಂದು ಸರಕಾರವೇನು ನಿಂತಿಲ್ಲ. ನಾವು ಇಲ್ಲೇ ಇದ್ದು ಕೆಲಸ ಮಾಡುತ್ತಿದ್ದೇವೆ. ಆದರೂ, ಸರಕಾರ ನಿಷ್ಕ್ರಿಯವಾಗಿದೆ, ಬರ ಪರಿಸ್ಥಿತಿ ನಿರ್ವಹಿಸಬೇಕಾದ ಮುಖ್ಯಮಂತ್ರಿ ವಿದೇಶಕ್ಕೆ ಹೋಗಿದ್ದಾರೆ ಎಂದು ಬಿಜೆಪಿ ನಾಯಕರು ಮಾಡುವ ಆಪಾದನೆ ಅರ್ಥಹೀನವಾದದ್ದು ಎಂದು ಅವರು ಹೇಳಿದರು.

ಕಡತ ವಿಲೇವಾರಿ: ಕಡತ ವಿಲೇವಾರಿ ಸಪ್ತಾಹದ ಹಿನ್ನೆಲೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ರಜಾದಿನವಾದ ರವಿವಾರವೂ ವಿಧಾನಸೌಧಕ್ಕೆ ಆಗಮಿಸಿ, ಕಡತ ವಿಲೇವಾರಿ ಮಾಡಿದರು. ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ರಾಜ್ಯಾದ್ಯಂತ ಕಂದಾಯ ಇಲಾಖೆಯ ಅಧಿಕಾರಿಗಳು ಇಂದು ಕಾರ್ಯನಿರ್ವಹಿಸಿ, ಕಡತ ವಿಲೇವಾರಿ ಮಾಡುತ್ತಿದ್ದಾರೆ ಎಂದರು.

ನಾನು ಯಾವುದೇ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದರೂ ಕಡತ ವಿಲೇವಾರಿ ಸಪ್ತಾಹ ಮಾಡುತ್ತೇನೆ. ಈ ಇಲಾಖೆಯಲ್ಲೂ ಅದೇ ಕೆಲಸ ಮಾಡುತ್ತಿದ್ದೇನೆ. ಜನರ ಕೆಲಸಗಳು ಕಾಲಮಿತಿಯಲ್ಲಿ ತ್ವರಿತಗತಿಯಲ್ಲಿ ಆಗಬೇಕು ಎಂಬುದು ನನ್ನ ಆಶಯ ಎಂದು ದೇಶಪಾಂಡೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News