ದಯಾನಾತ್ ಖಾನ್ ಹತ್ಯೆ ಸಂಘಪರಿವಾರದ ಜಾರ್ಖಂಡ್ ಹತ್ಯಾಕಾಂಡದ ಪ್ರಯೋಗ: ಇಲ್ಯಾಸ್ ತುಂಬೆ

Update: 2019-06-30 15:51 GMT

ಬೆಂಗಳೂರು, ಜೂ.30: ವಾಟ್ಸಪ್ ಸ್ಟೇಟಸ್‌ನಲ್ಲಿ ಧಾರ್ಮಿಕ ಧ್ವಜವನ್ನು ಬಳಸಿದ ಎಂಬ ಏಕೈಕ ಕಾರಣಕ್ಕೆ ‘ಪಾಕಿಸ್ತಾನದ ಧ್ವಜ ಬಳಸಿದ್ದಾನೆ’ ಎಂದು ಆರೋಪಿಸಿ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ದಯಾನಾತ್ ಖಾನ್ ಎಂಬ ಯುವಕನನ್ನು ಜೂ.15 ರಂದು ಹತ್ಯೆ ಮಾಡಿರುವ ಘಟನೆಯನ್ನು ಎಸ್‌ಡಿಪಿಐ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ. ಅಲ್ಲದೇ, ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನವನ್ನು ಹೇಳಿ, ಕಾನೂನು ಹೋರಾಟದ ಭರವಸೆ ನೀಡಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ‘ಘಟನೆಯು ಅತ್ಯಂತ ಅಮಾನವೀಯ ಕೃತ್ಯವಾಗಿದ್ದು, ಇದು ಕರ್ನಾಟಕದಲ್ಲಿ ಸಂಘಪರಿವಾರವು ನಡೆಸಿದ ಜಾರ್ಖಂಡ್ ಹತ್ಯಾಕಾಂಡದ ಪ್ರಯೋಗವಾಗಿದೆ ಎಂದು ದೂರಿದ್ದಾರೆ.

ಘಟನೆಯ ಬಗ್ಗೆ ಪೊಲೀಸ್ ಇಲಾಖೆಯು ದುರ್ಬಲವಾಗಿರುವ ಪ್ರಕರಣವನ್ನು ದಾಖಲಿಸುವ ಮೂಲಕ ಕರ್ತವ್ಯ ಲೋಪವನ್ನು ಎಸಗಿದೆ. ರಾಜ್ಯ ಸರಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಖೇದಕರ ಹಾಗೂ ಇದುವರೆಗೂ ಸಂತ್ರಸ್ತ ಕುಟುಂಬವನ್ನು ಯಾವೊಬ್ಬ ಜನಪ್ರತಿನಿಧಿಗಳು ಭೇಟಿಯಾಗದೆ ಇರುವುದನ್ನು ಗಮನಿಸಿದರೆ ಮುಸಲ್ಮಾನರ ಜೀವಕ್ಕೆ ಯಾವ ರೀತಿಯ ಬೆಲೆಯನ್ನು ಕಲ್ಪಿಸಲಾಗಿದೆ ಎಂಬುದು ತಿಳಿಯಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಬೇಡಿಕೆಗಳು: ದಯಾನಾತ್ ಖಾನ್ ತಾಯಿ ಪತ್ರಿಕಾಗೋಷ್ಠಿಯಲ್ಲಿ ಹಾಗೂ ಪೊಲೀಸ್ ಅಧೀಕ್ಷಕರಿಗೆ ನೀಡಿರುವ ದೂರಿನಲ್ಲಿ ತಿಳಿಸಿರುವ 5 ಮಂದಿ ಆರೋಪಿಗಳ ಹೆಸರುಗಳನ್ನು ಮರು ಹೇಳಿಕೆಯ ಮೂಲಕ ಎಫ್‌ಐಆರ್‌ನಲ್ಲಿ ದಾಖಲಿಸಿ ಆರೋಪಿಗಳನ್ನು ಶೀಘ್ರ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

ಸಂತ್ರಸ್ತ ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ ನೀಡಬೇಕು, ಪ್ರಕರಣದಲ್ಲಿ ಹೊನ್ನಾಳಿ ಪೊಲೀಸರು ನಿರ್ಲಕ್ಷ ಧೋರಣೆ ಅನುಸರಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು, ಮೃತ ದಯಾನಾತ್ ಖಾನ್ ಮನೆಯ ಆದಾಯದ ಮೂಲವಾಗಿದ್ದರಿಂದ ಅವರ ಸಹೋದರ ಸುಹೈಲ್ ಗೆ ಸರಕಾರಿ ಉದ್ಯೋಗ ನೀಡಬೇಕೆಂದು ಎಸ್‌ಡಿಪಿಐ ಸರಕಾರಕ್ಕೆ ಬೇಡಿಕೆಯಿಟ್ಟಿದೆ.

ನಿಯೋಗದಲ್ಲಿ ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ಅಡ್ವೊಕೇಟ್ ಮಜೀದ್ ಖಾನ್, ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಸಮಿತಿ ಸದಸ್ಯ ಅಡ್ವೊಕೇಟ್ ಅಮೀನ್ ಮೊಹ್ಸಿನ್, ಶಿವಮೊಗ್ಗ ಜಿಲ್ಲಾಧ್ಯಕ್ಷ ಸಲೀಮ್ ಅಹಮದ್ ಮತ್ತು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News