ಪ್ರತಿ ತಾಲೂಕಿನಲ್ಲಿ ರಸ್ತೆ ಬಂದ್ ಚಳವಳಿ: ದರ್ಶನ್ ಪುಟ್ಟಣ್ಣಯ್ಯ

Update: 2019-06-30 16:22 GMT

ಮಂಡ್ಯ, ಜೂ.30: ಕೆಆರ್‌ಎಸ್‌ ಮತ್ತು ಹೇಮಾವತಿ ಜಲಾಶಯದಿಂದ ಬೆಳೆಗಳಿಗೆ ನೀರು ಬಿಡುಗಡೆಗೆ ಒತ್ತಾಯಿಸಿ ಪ್ರತಿ ತಾಲೂಕಿನಲ್ಲಿ ರಸ್ತೆ ಬಂದ್ ಚಳವಳಿ ನಡೆಸಲು ರೈತಸಂಘ ತೀರ್ಮಾನಿಸಿದೆ.

ಅಹೋರಾತ್ರಿ ಚಳವಳಿಗೆ ಸರಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಚಳವಳಿಯ ಸ್ವರೂಪ ಬದಲಾಯಿಸಲು ಕಾರ್ಯಕರ್ತರ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ರೈತಸಂಘದ ನಾಯಕ ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್ ತಿಳಿಸಿದ್ದಾರೆ.

ವಾರಗಳ ಕಾಲ ಅಹೋರಾತ್ರಿ ಧರಣಿಗೆ ಸರಕಾರ ಕ್ರಮಕೈಗೊಳ್ಳದಿದ್ದಾಗ ಕೆಆರ್‌ಎಸ್‌ ಜಲಾಶಯಕ್ಕೆ ಮುತ್ತಿಗೆ ಹಾಕಲು ಹೋದಾಗ ಮುಖ್ಯಮಂತ್ರಿ ಕುಮಾರಸ್ವಾಮಿ ಪೊಲೀಸರನ್ನು ಬಿಟ್ಟು ಬಂಧಿಸಿದರು. ಮಗನ ಸೋಲಿನ ಹಿನ್ನೆಲೆಯಲ್ಲಿ ಸಿಎಂ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಮೈಷುಗರ್ ಮತ್ತು ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸುವುದರ ಜತೆಗೆ ಇತರೆ ಕಾರ್ಖಾನೆಗಳಿಂದ ಬರಬೇಕಾಗಿರುವ ಬಾಕಿ ಹಣ ಪಾವತಿಗೆ ಜಿಲ್ಲಾಧಿಕಾರಿಗಳು ಕ್ರಮಕೈಗೊಂಡು, ಆ ಕಾರ್ಖಾನೆಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದೆವು. ಆದರೆ, ಕ್ರಮ ವಹಿಸಲಿಲ್ಲ. ಹಾಗಾಗಿ ಈ ಬಗ್ಗೆ ರಾಜ್ಯಪಾಲರಿಗೆ ಲಿಖಿತ ದೂರು ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಒಣಗಿರುವ ಬೆಳೆಗಳಿಗೆ ವೈಜ್ಞಾನಿಕ ಪರಿಹಾರ ಹಾಗೂ ಉಳಿದ ಬೆಳೆಗಳ ರಕ್ಷಣೆಗೆ ತಕ್ಷಣ ನೀರು ಬಿಡಬೇಕು ಎಂದು ಜಿಲ್ಲೆಯ ಎಲ್ಲಾ ಶಾಸಕರನ್ನು ಒತ್ತಾಯಿಸುತ್ತೇವೆ. ಒಂದು ವೇಳೆ ರೈತರಿಗೆ ರಕ್ಷಣೆ ನೀಡದಿದ್ದರೆ ಶಾಸಕರಿಗೆ ಯಾವ ರೀತಿಯ ಪ್ರಶ್ನೆ ಮಾಡುವುದೆಂದು ಮುಂದೆ ತೀರ್ಮಾನಿಸಲಾಗುವುದೆಂದು ಅವರು ಎಚ್ಚರಿಸಿದ್ದಾರೆ.

ಕೆ.ಟಿ.ಗೋವಿಂದೇಗೌಡ, ರಾಮಕೃಷ್ಣಯ್ಯ, ಬಿ.ಬೊಮ್ಮೇಗೌಡ, ಜಿಎಸ್.ಲಿಂಗಪ್ಪಾಜಿ ಸೇರಿದಂತೆ ಸಂಘದ ಹಲವು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News