ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತಿದೆ ದೇವೇಗೌಡರ ಪಾದಯಾತ್ರೆ: ಆರ್.ಅಶೋಕ್ ವ್ಯಂಗ್ಯ
ಮೈಸೂರು,ಜೂ.30: ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ ಹಾಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪಾದಯಾತ್ರೆ ಮಾಡಲು ಹೊರಟಿದ್ದಾರೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ವ್ಯಂಗ್ಯವಾಡಿದರು.
ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಮುಗಿದ ಮೇಲೆ ದೇವೇಗೌಡರು ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಚುನಾವಣೆಗೆ ನಿಲ್ಲುವುದಿಲ್ಲ ಎಂದು ದೇವೇಗೌಡರು ಹೇಳುತ್ತಾರೆ. ನಿಲ್ಲುವುದಿಲ್ಲ ಎಂದರೆ ನಿಲ್ಲುತ್ತಾರೆ ಎಂದರ್ಥ. ಮಧ್ಯಂತರ ಚುನಾವಣೆ ಎದುರಾದರೆ ಖಂಡಿದ ದೇವೇಗೌಡರು ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಿದರು.
ಎಚ್.ಡಿ.ದೇವೇಗೌಡ, ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಮಾತ್ರ ಮೈತ್ರಿ ಸರ್ಕಾರ ಬೇಕಿರುವುದು. ಬೇರೆ ಯಾರೊಬ್ಬರಿಗೂ ಈ ಸರ್ಕಾರ ಬೇಕಿಲ್ಲ, ಒಂದು ವೇಳೆ ಸರ್ಕಾರ ಪತನವಾದರೆ ಈ ಮೂವರಿಂದಲೇ ಎಂದು ಹೇಳಿದರು.
ದೇವೇಗೌಡರು ಎಲ್ಲಾ ಮುಗಿದ ಮೇಲೆ ಪಾದಯಾತ್ರೆಗೆ ಹೊರಟಿದ್ದಾರೆ. ಪಾಪ ಅವರಿಗೆ ವಯಸ್ಸಾಗಿದೆ. ಈ ವಯಸ್ಸಿನಲ್ಲಿ ಏಕೆ ಪಾದಯಾತ್ರೆ ಮಾಡಬೇಕು ಎಂದು ಪ್ರಶ್ನಿಸಿದರು.