ರಾಜ್ಯ ಸರಕಾರ ಸೇರಿ 37 ಪ್ರತಿವಾದಿಗಳಿಗೆ ಹೈಕೋರ್ಟ್ ನೋಟಿಸ್

Update: 2019-07-01 18:16 GMT

ಬೆಂಗಳೂರು, ಜು.1: ನಿಯಮದಂತೆ ಆಸ್ತಿ ಘೋಷಣೆ ಮಾಡಿಕೊಳ್ಳದ ಬಿಬಿಎಂಪಿ ಸದಸ್ಯರನ್ನು ಅನರ್ಹಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರ, ಬಿಬಿಎಂಪಿ, ಪ್ರಾದೇಶಿಕ ಆಯುಕ್ತರು ಹಾಗೂ 34 ಪಾಲಿಕೆ ಸದಸ್ಯರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಸಾಮಾಜಿಕ ಹೋರಾಟಗಾರ ಕೆ.ಅನಿಲ್‌ಕುಮಾರ್ ಶೆಟ್ಟಿ ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಜಿ.ನರೇಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಕರ್ನಾಟಕ ಮುನಿಸಿಪಲ್ ಕಾಯ್ದೆ(ಕೆಎಂಸಿ)-1967ರ ಕಲಂ 19ನ್ನು ಉಲ್ಲಂಘಿಸಿ ಆಸ್ತಿ ಘೋಷಣೆ ಮಾಡದೇ ಇರುವ ಸದಸ್ಯರನ್ನು ಅನರ್ಹಗೊಳಿಸಲು ನಿರ್ದೇಶಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು. ಅಧಿಕಾರ ವಹಿಸಿಕೊಂಡ ಮೇಲೆ ಪಾಲಿಕೆ ಸದಸ್ಯರು ಒಂದು ತಿಂಗಳೊಳಗೆ ಆಸ್ತಿ ಘೋಷಣೆ ಮಾಡಿಕೊಳ್ಳಬೇಕು. ಆದರೆ, ಇಲ್ಲಿಯವರೆಗೆ ಆಸ್ತಿ ಮತ್ತು ಋಣಭಾರ ವಿವರಗಳನ್ನು ಸಲ್ಲಿಸಿಲ್ಲ ಎಂದು ಅರ್ಜಿದಾರರು ಅರ್ಜಿಯಲ್ಲಿ ತಿಳಿಸಿದ್ದಾರೆ.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಪಾಲಿಕೆ ಸದಸ್ಯರು ಸೇರಿ 37 ಜನ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾಣೆಯನ್ನು ಜು.3ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News