ಯಾರು ಯಾವ ಆಟ ಆಡುತ್ತಿದ್ದಾರೆ ಎಂದು ಗೊತ್ತಿದೆ: ಸಚಿವ ಡಿಕೆಶಿ

Update: 2019-07-02 13:21 GMT

ಬೆಂಗಳೂರು, ಜು.2: ರಾಜ್ಯ ಸರಕಾರ ಸುಭದ್ರವಾಗಿದ್ದು ಶಾಸಕರ ಮನವೊಲಿಸುವ ಅವಶ್ಯಕತೆ ಇಲ್ಲ. ಯಾರು ಯಾವ ಆಟ ಆಡುತ್ತಿದ್ದಾರೆ ಅಂತಾ ಗೊತ್ತಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಮಂಗಳವಾರ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಉಳಿಯಬೇಕು ಎಂಬುದು ಎಲ್ಲ ಶಾಸಕರ ಇಚ್ಛೆ. ಹೀಗಾಗಿ ಎಲ್ಲ ಶಾಸಕರು ಸ್ವಯಂಪ್ರೇರಿತರಾಗಿ ಪಕ್ಷದಲ್ಲೇ ಉಳಿಯುವ ಮನಸ್ಸು ಮಾಡಿದ್ದಾರೆ. ಯಾವ ಶಾಸಕರನ್ನು ಮನವೊಲಿಸುವ ಅವಶ್ಯಕತೆ ಇಲ್ಲ ಎಂದರು.

ಯಾರು ಯಾವ ಆಟ ಆಡುತ್ತಿದ್ದಾರೆ. ಯಾರು ಯಾವ ಚೆಸ್ ಪಾನ್ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ನಾವು ಕಣ್ಣು ಮುಚ್ಚಿ ರಾಜಕೀಯ ನಡೆಸುತ್ತಿಲ್ಲ. ಎಲ್ಲದಕ್ಕೂ ಔಷಧಿ ಇದೆ. ಅದಕ್ಕೆ ಸಮಯ ಸಂದರ್ಭ ಬಂದಾಗ ಉತ್ತರ ನೀಡುತ್ತೇನೆ ಎಂದು ಶಿವಕುಮಾರ್ ಹೇಳಿದರು.

ರಾಜ್ಯ ಉಸ್ತುವಾರಿ ಹೊತ್ತಿರುವ ವೇಣುಗೋಪಾಲ್ ಅವರು ಏನು ಮಾಡಬೇಕೋ, ಏನು ನಿರ್ದೇಶನ ನೀಡಬೇಕೋ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅವರು ಬರುವ ಅಗತ್ಯ ಇಲ್ಲ. ನಾವಿದ್ದೇವೆ ನಾವು ನಿಭಾಯಿಸುತ್ತೇವೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಖಾಸಗಿ ಕಾರ್ಯಕ್ರಮಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ. ಅವರಿಗೂ ಖಾಸಗಿ ಜೀವನವಿದೆ ಎಂದು ಅವರು ತಿಳಿಸಿದರು.

ಸದ್ಯ ಸರಕಾರ ಸುಭದ್ರವಾಗಿದೆ, ಪಕ್ಷದಲ್ಲಿ ಸಮಸ್ಯೆ ಇಲ್ಲ ಅಂತಾ ಗೊತ್ತಿದೆ. ಹೀಗಾಗಿ ಅವರು ವಿದೇಶಕ್ಕೆ ಹೋಗಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರಂತರ ಸಂಪರ್ಕದಲ್ಲಿದ್ದು ನಾಲ್ಕೈದು ಬಾರಿ ಮಾತನಾಡಿದ್ದೇವೆ. ಅವರು ಎಲ್ಲ ಶಾಸಕರ ಜತೆ ಮಾತನಾಡಿದ್ದಾರೆ. ಹೀಗಾಗಿ ಯಾರು ಆತಂಕ ಪಡುವ ಅಗತ್ಯವಿಲ್ಲ. ಈ ಸರಕಾರ ಪೂರ್ಣ ಅವಧಿ ಪೂರೈಸಲಿದೆ ಎಂದು ಶಿವಕುಮಾರ್ ಹೇಳಿದರು.

ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ವಿದ್ಯಾವಂತ, ಬುದ್ಧಿವಂತ, ಪ್ರಜ್ಞಾವಂತ ನಾಯಕ. ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಕಾಂಗ್ರೆಸ್ ನಾಯಕ. ಅವರು ಪಕ್ಷ ಬಿಡಲ್ಲ. ನನ್ನ ಜತೆ ಅವರು ಮಾತನಾಡುತ್ತಾರೆ. ಸದ್ಯ ನಾನು ಮದ್ದೂರಿಗೆ ಹೋಗಿ ಅಲ್ಲಿ ದಿವಂಗತ ಎಸ್.ಎಂ ಶಂಕರ್ ಅವರ ಕಾರ್ಯದಲ್ಲಿ ಭಾಗಿಯಾಗಿ ಮರಳುತ್ತೇನೆ ಎಂದು ಅವರು ತಿಳಿಸಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆನಂದ್ ಸಿಂಗ್ ಈಗಲೂ ನನಗೆ ಆತ್ಮೀಯರು. ಈಗಲೂ ನನಗೆ ವಿಶ್ವಾಸವಿದೆ ಅವರು ತಮ್ಮ ನಿರ್ಧಾರ ಮರುಪರಿಶೀಲಿಸಿ ಪಕ್ಷದಲ್ಲೇ ಉಳಿತಾರೆ. ರಾಜೀನಾಮೆ ಹಿಂಪಡೆಯುತ್ತಾರೆ ಎಂಬ ನಂಬಿಕೆ ಇದೆ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News