ಬಿಜೆಪಿಯ ಐದು ಶಾಸಕರು ನಮ್ಮ ಜೊತೆ ಬರಲು ಸಿದ್ಧರಿದ್ದಾರೆ: ಸಚಿವ ಆರ್.ಬಿ.ತಿಮ್ಮಾಪುರ
ಬಾಗಲಕೋಟೆ, ಜು.2: ಬಿಜೆಪಿಯ ಐದು ಶಾಸಕರು ನಮ್ಮ ಜೊತೆ ಬರಲು ಸಿದ್ಧರಿದ್ದಾರೆ. ಸ್ವತಃ ನನ್ನ ಜೊತೆ ಇಬ್ಬರು ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪುರ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಶಾಸಕರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಕೊಡಿಸಿದರೆ ನಾವು ಸಹ ರಿವರ್ಸ್ ಆಪರೇಶನ್ ಮಾಡುತ್ತೇವೆ. ಈಗಾಗಲೇ ಬಿಜೆಪಿಯ ಐವರು ಶಾಸಕರ ಜೊತೆ ಮಾತುಕತೆ ನಡೆದಿದೆ ಎಂದು ಎಚ್ಚರಿಕೆ ನೀಡಿದರು.
ಆದಾಯ ತೆರಿಗೆ(ಐಟಿ), ಜಾರಿ ನಿರ್ದೇಶನಾಲಯ(ಇಡಿ) ಬೆದರಿಕೆಯಿಂದ ಶಾಸಕರು ರಾಜೀನಾಮೆಗೆ ಮುಂದಾಗಿದ್ದು, ಕೇಂದ್ರ ಸರಕಾರ ಐಟಿ, ಇಡಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹೀಗೆ ದೇಶದೆಲ್ಲೆಡೆ ಇದೇ ರೀತಿ ನಡೆಯುತ್ತಿದ್ದು, ಶಾಸಕರ ರಾಜೀನಾಮೆಯ ಹಿಂದೆ ಬೆದರಿಕೆ ತಂತ್ರವಿದೆ ಎಂದು ಅವರು ಆರೋಪಿಸಿದರು.
ಕೆಲವು ಕೈಗಾರಿಕೋದ್ಯಮಿಗಳಿಗೂ ಬೆದರಿಕೆ ಇದೆ. ಶಾಸಕ ರಮೇಶ ಜಾರಕಿಹೊಳಿ ಇನ್ನೂ ರಾಜೀನಾಮೆ ಸಲ್ಲಿಸಿಲ್ಲ. ರಮೇಶ ಜಾರಕಿಹೊಳಿ ನಮ್ಮ ಜೊತೆಗೆ ಇದ್ದಾರೆ. ಸರಕಾರ ಸುಭದ್ರವಾಗಿದೆ. ಒಂದು ವೇಳೆ ನಮ್ಮ ಕೆಲ ಶಾಸಕರು ರಾಜೀನಾಮೆ ನೀಡಿ ಸರಕಾರ ಕೆಡವಲು ಮುಂದಾದಲ್ಲಿ, ಬಿಜೆಪಿಯ ಐದು ಜನ ಶಾಸಕರು ನಮ್ಮ ಕಡೆಗೆ ಬರಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.